ನವದೆಹಲಿ: ಮಾಜಿ ಸಿಎಂ ಸಿದ್ದರಾಮಯ್ಯ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಗಾಂಧಿಯವರನ್ನು ಇಂದು ಭೇಟಿಯಾಗಲಿದ್ದಾರೆ. ನವದೆಹಲಿಯ 10 ಜನಪಥ್ ನಲ್ಲಿರುವ ಸೋನಿಯಗಾಂಧಿ ನಿವಾಸದಲ್ಲಿ ಭೇಟಿಯಾಗಲಿದ್ದು, ಕೆಪಿಸಿಸಿ ಅಧ್ಯಕ್ಷರ ನೇಮಕ ಹಾಗೂ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಮುಂದುವರಿಯುವ ಬಗ್ಗೆ ಚರ್ಚೆ ಮಾಡಲಿದ್ದಾರೆ. ಹೀಗಾಗಿ ಇಂದು ಮಹತ್ವದ ಪ್ರಕಟಣೆ ಹೊರಬೀಳಲಿದೆ ಎಂಬ ನಿರೀಕ್ಷೆ ಇದೆ.
ಉಪ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಇಲ್ಲದೆ ನಿರ್ವಾತ ವಾತವರಣ ಸೃಷ್ಟಿಯಾಗಿದೆ. ಬೈ ಎಲೆಕ್ಷನ್ ಸೋಲಿನ ಜವಾಬ್ದಾರಿ ಹೊತ್ತು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರು. ಈಗ ಸ್ಥಾನ ಭರ್ತಿ ಮಾಡುವ ಸಂಬಂಧ ಸೋನಿಯಗಾಂಧಿ ಚರ್ಚೆ ಮಾಡಲಿದ್ದಾರೆ. ಸೋನಿಯಾ ಗಾಂಧಿ ಭೇಟಿ ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನೂ ಸಿದ್ದರಾಮಯ್ಯ ಭೇಟಿಯಾಗಲಿದ್ದಾರೆ.
ರಾಜ್ಯ ನಾಯಕತ್ವ ಗುದ್ದಾಟಕ್ಕೆ ಮದ್ದು ಅರೆಯಲು ಹಿರಿಯ ನಾಯಕ ಮಧುಸೂಧನ್ ಮಿಸ್ತ್ರಿ ನೇತೃತ್ವದ ವೀಕ್ಷಕರ ತಂಡವನ್ನು ರಾಜ್ಯಕ್ಕೆ ಕಳುಹಿಸಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಪಕ್ಷ ನಾಯಕ ಸ್ಥಾನದ ವಿಚಾರವಾಗಿ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ಸೋನಿಯಾಗಾಂಧಿಯವರಿಗೆ ತಂಡ ಈಗಾಗಲೇ ವರದಿ ನೀಡಿದೆ.
ಅಲ್ಲದೆ ರಾಜ್ಯ ನಾಯಕರು ದೆಹಲಿಗೆ ಬಂದು ಪ್ರತ್ಯೇಕವಾಗಿ ಹೈಕಮಾಂಡ್ ಭೇಟಿಯಾಗಿ ಲಾಬಿ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್, ಕೆ.ಹೆಚ್ ಮುನಿಯಪ್ಪ, ಬಿ.ಕೆ ಹರಿಪ್ರಸಾದ್, ಸತೀಶ್ ಜಾರಕಿಹೊಳಿ ಲಾಬಿ ನಡೆಸಿದರೆ, ವಿಪಕ್ಷ ನಾಯಕನ ಸ್ಥಾನಕ್ಕೆ ಹೆಚ್.ಕೆ.ಪಾಟೀಲ್ ಪ್ರಯತ್ನಿಸುತ್ತಿದ್ದಾರೆ. ಈ ಎಲ್ಲದರ ಮಧ್ಯೆ ಈ ಹಿಂದೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆಯನ್ನು ಹೈಕಮಾಂಡ್ ಇನ್ನೂ ಒಪ್ಪಿಕೊಂಡಿಲ್ಲ. ಸಿದ್ದರಾಮಯ್ಯರನ್ನೇ ಮುಂದುವರಿಸಬೇಕು ಎಂಬುದು ಬಹುತೇಕ ಶಾಸಕರ ಒಲವು.
ಈ ಸಂಬಂಧ ಇಂದು ಸಿದ್ದರಾಮಯ್ಯ ಜೊತೆಗೆ ಮಾತುಕತೆ ನಡೆಸಲಿರುವ ಸೋನಿಯಗಾಂಧಿ, ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಸಿದ್ದರಾಮಯ್ಯನವರ ಅಭಿಪ್ರಾಯ ಪರಿಗಣಿಸಿ ಅಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಜೊತೆಗಿರುವ ಭಿನ್ನಾಭಿಪ್ರಾಯಗಳ ಬಗ್ಗೆ ಸಹ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಈಶ್ವರ ಖಂಡ್ರೆ, ಕೃಷ್ಣಭೈರೇಗೌಡ ಬಗ್ಗೆ ಸಭೆಯಲ್ಲಿ ಚರ್ಚೆಯಾಗಬಹುದು ಎನ್ನಲಾಗುತ್ತಿದೆ. ಜೊತೆಗೆ ವಿಪಕ್ಷ ನಾಯಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಹಿಂಪಡೆದು ಸ್ಥಾನದಲ್ಲಿ ಮುಂದುವರೆಯುವಂತೆ ಸೂಚಿಸುವ ಸಾಧ್ಯತೆ ಇದೆ.
ಹೀಗಾಗಿ ಇಂದು ಸಿದ್ದರಾಮಯ್ಯ, ಸೋನಿಯಾ ಗಾಂಧಿಯವರ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಮಾತುಕತೆ ಸಕ್ಸಸ್ ಆದರೆ ಸಂಕ್ರಾಂತಿ ಬಳಿಕ ರಾಜ್ಯ ಕಾಂಗ್ರೆಸ್ ನಲ್ಲಿರುವ ನಾಯಕತ್ವದ ಪ್ರಶ್ನೆಗೆ ಉತ್ತರ ಸಿಗುವ ಸಾಧ್ಯತೆ ಇದೆ.