ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಸ್ಪಷ್ಟಪಡಿಸಿದ್ದಾರೆ.
ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಕೆಲ ಅಭಿಪ್ರಾಯಗಳು ಬೇರೆ ಇರಬಹುದು. ಆದರೆ ಪಕ್ಷಕ್ಕೆ ಡ್ಯಾಮೇಜ್ ಆಗುವಂತಹ ಭಿನ್ನಾಭಿಪ್ರಾಯಗಳಿಲ್ಲ ಎಂದರು.
ಹೈಕಮಾಂಡ್ ಈಗಾಗಲೇ ಉಪಚುನಾವಣೆಗೆ 8 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಉಪಚುನಾವಣೆ ಕ್ಷೇತ್ರಗಳ ಸಮೀಕ್ಷೆಗೆ ಕೆಲ ನಾಯಕರನ್ನು ಕಳುಹಿಸಲಾಗಿತ್ತು. ಸಮೀಕ್ಷೆಯ ವರದಿ ಬಂದ ನಂತರ ಎರಡು ಸಭೆಗಳನ್ನು ನಡೆಸಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಅಭ್ಯರ್ಥಿಗಳ ಹೆಸರು ಹೈಕಮಾಂಡ್ ನಿರ್ಧರಿಸಿದ್ದು ನಾವಲ್ಲ. ಇಲ್ಲಿ ಡಿಕೆ ಶಿವಕುಮಾರ್ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಎಂದು ತಿಳಿಸಿದರು.
ಉಪ ಚುನಾವಣೆ ಪ್ರಚಾರ ಈಗಾಗಲೇ ಅರಂಭಿಸಿದ್ದು, ಕಾರ್ಯಕರ್ತರ ಸಭೆಗಳನ್ನು ನಡೆಸಲಾಗುತ್ತಿದೆ. ಅನರ್ಹ ಶಾಸಕರ ಪ್ರಕರಣ ನ್ಯಾಯಾಲಯದಲ್ಲಿದ್ದು, ತೀರ್ಪು ಬಂದ ಬಳಿಕ ಪ್ರಚಾರದ ವೇಗವನ್ನು ಹೆಚ್ಚಿಸಲಾಗುವುದು.
15ರಲ್ಲಿ 12 ಗೆಲುವು ನಮ್ಮದು: ಉಪ ಚುನಾವಣೆಯ 15 ಕ್ಷೇತ್ರಗಳ ಪೈಕಿ 12ರಲ್ಲಿ ನಮ್ಮದೇ ಗೆಲುವು. 15 ಕ್ಷೇತ್ರದಲ್ಲಿ ನಾವೇ ಗೆದ್ದರೂ ಆಶ್ಚರ್ಯವೇನಿಲ್ಲ. ಯಡಿಯೂರಪ್ಪನವರು ಆಶಾಭಾವನೆಯಿಂದ 13 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಜನರು ಬಹುತೇಕ ಪಕ್ಷಾಂತರಿಗಳನ್ನು ಸೋಲಿಸಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ಅದೇ ರೀತಿ ಆಗುವ ಸಾಧ್ಯತೆಗಳು ಹೆಚ್ಚಿದ್ದು, ಗೆಲುವು ನಮ್ಮದೇ ಎಂದು ಭವಿಷ್ಯ ನುಡಿದರು.