ಶಿವಮೊಗ್ಗ: ಒಬ್ಬ ಜನಪ್ರತಿನಿಧಿ ಯಾವ ಕ್ಷೇತ್ರದಲ್ಲಿ ಗೆದ್ದಿರುತ್ತಾನೋ, ಅದೇ ಕ್ಷೇತ್ರದಲ್ಲೇ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ, ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎಂದರ್ಥ. ಅದು ಬಿಟ್ಟು ಕ್ಷೇತ್ರ ಬದಲಿಸುತ್ತಾ ಹೋದರೆ ಜನರ ಪ್ರೀತಿ ವಿಶ್ವಾಸ ಗಳಿಸಿಲ್ಲ ಎಂಬ ಅಭಿಪ್ರಾಯ ಬರುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa), ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಟಾಂಗ್ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಕೋಲಾರದಲ್ಲಿ (Kolar) ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯ ಎಲ್ಲಿ ನಿಲ್ಲುತ್ತಾರೋ, ಬಿಡುತ್ತಾರೋ ನಮಗೇನು ಸಂಬಂಧ ಇಲ್ಲ. ಆದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸೋಲಿಸೋಕೆ ನಮಗೆ ಬಿಜೆಪಿ ಜೊತೆ ಒಪ್ಪಂದ ಅವಶ್ಯಕತೆ ಇಲ್ಲ: ಕುಮಾರಸ್ವಾಮಿ
ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾವುದೋ ಕಾರಣಕ್ಕೆ ಸೋಲು ಅನುಭವಿಸಿದೀರಿ. ಕಾರ್ಯಕರ್ತರು ಕೆಲಸ ಮಾಡಿಲ್ಲ ಎಂದು ಬೈಯ್ದಿರಿ. ಈ ಬಾರಿ ನೀವು ಚಾಮುಂಡೇಶ್ವರಿಯಿಂದಲೇ ಸ್ಪರ್ಧಿಸಿ, ಗೆದ್ದು ತೋರಿಸಿ. ಮುಖ್ಯಮಂತ್ರಿ ಆಗಿದ್ದವರು ನಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಕೆಲಸ ಆಗುತ್ತದೆ ಎಂಬ ನಂಬಿಕೆ, ವಿಶ್ವಾಸದಿಂದ ಜನ ಕರೆಯುತ್ತಾರೆ. ಆದರೆ ಯಾವ ಕ್ಷೇತ್ರದಲ್ಲಿ ಗೆದ್ದಿದ್ದೀರೋ, ಯಾವ ಕ್ಷೇತ್ರದಲ್ಲಿ ಸೋತಿದ್ದೀರೋ ಅದೇ ಕ್ಷೇತ್ರದಲ್ಲಿ ಮುಂದುವರಿಯಬೇಕು. ಅದು ಪ್ರಜಾಪ್ರಭುತ್ವ ವ್ಯವಸ್ಥೆ. ಹಾಗಾದರೆ ಕೋಲಾರ ಜನರಿಗೆ ಮಾತ್ರ ನಿಮ್ಮ ಪ್ರೀತಿನಾ? ಮುಖ್ಯಮಂತ್ರಿ ಆಗಿದ್ದವರು ನೀವು 224 ಕ್ಷೇತ್ರಗಳಲ್ಲಿ ಪ್ರೀತಿ ಇಟ್ಟುಕೊಳ್ಳಬೇಕು ಎಂದರು. ಇದನ್ನೂ ಓದಿ: ಕೋಲಾರ ಬೇಡ, ಚಾಮುಂಡೇಶ್ವರಿಯಲ್ಲಿ ನಿಂತು ಗೆದ್ದು ಬನ್ನಿ- ಸಿದ್ದರಾಮಯ್ಯಗೆ ಈಶ್ವರಪ್ಪ ಸಲಹೆ
ಚಾಮುಂಡೇಶ್ವರಿಯಲ್ಲಿ ಒಳ್ಳೆಯ ಕೆಲಸ ಮಾಡಿದ್ದೀರಿ. ಆದರೂ ಚುನಾವಣೆಯಲ್ಲಿ ಸೋಲು ಕಾಣಬೇಕಾಯ್ತು. ಚಾಮುಂಡೇಶ್ವರಿಯಲ್ಲಿ ಸೋತೆ ಅಂತಾ ಬಾದಾಮಿಗೆ ಹೋಗೋದು, ಬಾದಾಮಿಯಲ್ಲಿ ಸೋಲುತ್ತೀನಿ ಎಂಬ ಭಯದಿಂದ ಕೋಲಾರಕ್ಕೆ ಹೋಗುವುದು ಸರಿಯಲ್ಲ. ನೀವು ಕೋಲಾರಕ್ಕೆ ಹೋಗಬೇಡಿ, ಚಾಮುಂಡೇಶ್ವರಿಯಲ್ಲಿ ಗೆದ್ದು ಬನ್ನಿ ನೋಡೋಣ ಎಂದು ಸವಾಲೆಸೆದರು.