ಕಲಬುರಗಿ: ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಪರಿಹಾರ ಕೊಡುತ್ತಿದೆ. ಬಿಪಿಎಲ್ ಇರಲಿ ಯಾವುದೇ ಕಾರ್ಡ್ ಇದ್ದರೂ ಪರಿಹಾರ ಕೊಡಬೇಕು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಅವಾಂತರ ಹಿನ್ನೆಲೆ ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕಾಲುವೆ ಸರಿಯಾಗಿ ನಿರ್ವಹಣೆ ಮಾಡಬೇಕು. ಅದೇ ನೀರು ರಸ್ತೆ ಮನೆಗಳಿಗೆ ನುಗ್ಗುತ್ತಿದೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿ ರಾಜಕಾಲುವೆ ಸ್ವಚ್ಛತೆ ಮಾಡಬೇಕಿತ್ತು. ಆದರೆ ಸರ್ಕಾರ ಆಗ ಮಲಗಿ ಈಗ ಜನರು ಸಂಕಷ್ಟದರುವ ವೇಳೆ ಪರಿಹಾರ ಕೊಡುವುದಾಗಿ ಹೇಳುತ್ತಿದ್ದಾರೆ. ಈಗ 1,500 ಕೋಟಿ ಹಣ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ಸರ್ಕಾರ ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಪರಿಹಾರ ಕೊಡುತ್ತಿದೆ. ಬಿಪಿಎಲ್ ಇರಲಿ ಯಾವುದೇ ಕಾರ್ಡ್ ಇದ್ದರೂ ಪರಿಹಾರ ಕೊಡಬೇಕು. ರಾಜಕಾಲುವೆ ಒತ್ತುವರಿಯಾಗಿದ್ದು, ಅನೇಕ ಕಡೆ ಅದರ ಮೇಲೆ ಮನೆ ಕಟ್ಟಿದ್ದಾರೆ. ಅದನ್ನು ಸರ್ಕಾರ ಪರಿಶೀಲನೆ ಮಾಡುತ್ತಿಲ್ಲ. ಬಿಎಸ್‍ವೈ ಅವರು ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರು ಚಿತ್ರಣ ಬದಲು ಮಾಡುತ್ತೇನೆ ಅಂದಿದ್ದರು, ಆದರೆ ಈಗ ಚಿತ್ರಣವೇ ಕೆಟ್ಟಿದ್ದು, ರಸ್ತೆಗಳೆಲ್ಲ ತಗ್ಗು ಗುಂಡಿಗಳಾಗಿದ್ದಾವೆ. ಓಲ್ಡ್ ಬೆಂಗಳೂರು ಸಿಟಿಯಲ್ಲಿ ಚಿಕ್ಕ ನಾಲೆಗಳಿವೆ. ಹೀಗಾಗಿ ನೀರು ರಸ್ತೆಗೆ ಬರುತ್ತವೆ. ಈ ಕಾಮಗಾರಿಗಾಗಿ ನಾನು 1,700 ಕೋಟಿ ರೂ. ಹಣ ನೀಡಿದೆ. ಆದರೆ ಇವರು ಅಧಿಕಾರಕ್ಕೆ ಬಂದ ಮೇಲೆ ಹಣವೇ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಪಠ್ಯ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಅವರು, ಭಗತ್‌ಸಿಂಗ್ ಪಠ್ಯ ತೆಗೆದಿದ್ದೀರಾ ಅಂತ ಹೇಳುವುದು ದೇಶದ್ರೋಹದ ಕೆಲಸಾನಾ? ದೇಶದ್ರೋಹ ಮಾಡುವವರು ಯಾರು, ನಾವಾ, ಅವರಾ? ಹೆಡಗೆವಾರ್ ಭಾಷಣ ಬೇಡ ಅಂತ ನಾನು ಹೇಳಿದ್ದೆ. ಹೆಡ್ಗೆವಾರ್, ಘೋಡ್ಸೆ ಪಾಠಗಳನ್ನು ಮಕ್ಕಳಿಗೆ ಹೇಳಿಕೊಡುವುದಾ? ಭಗತಸಿಂಗ್ ಪಾಠ ಬಿಟ್ಟಿದ್ದರು, ವಿರೋಧ ವ್ಯಕ್ತವಾದ ಮೇಲೆ ಇದೀಗ ಮತ್ತೆ ಸೇರಿಸುತ್ತಿದ್ದಾರೆ. ಘೋಡ್ಸೆ ಮತ್ತು ಹೆಡ್ಗೆವಾರ್ ಆರ್‌ಎಸ್‍ಎಸ್‍ನವರೇ ಸ್ವತಂತ್ರ ಹೋರಾಟದಲ್ಲಿ ಹೆಡ್ಗೆವಾರ್ ಪಾತ್ರ ಏನು? ಅವರೇನು ಜೈಲಿಗೆ ಹೋಗಿದ್ರಾ? ಸಂವಿಧಾನದ ಆಶಯಗಳನ್ನು ಮಕ್ಕಳಿಗೆ ಹೇಳಿಕೊಡಬೇಕು. ದೇಶಕ್ಕಾಗಿ ಹೋರಾಡಿದವರ ಪಾಠವನ್ನು ಮಕ್ಕಳಿಗೆ ಹೇಳಿಕೊಡಬೇಕು. ಮಕ್ಕಳ ಮನಸ್ಸಿನಲ್ಲಿ ದೇಶ ಮೊದಲು ಎನ್ನುವುದು ಬರುವಂತ ಪಾಠ ಕಲಿಸಬೇಕು. ಎಡಪಂಥ ಬಲಪಂಥ ಎನ್ನುವುದಕ್ಕಿಂತ ದೇಶ ಮುಖ್ಯ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಳೆ ರೌಂಡ್ಸ್ ಬಿಟ್ಟು ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ ಸಿಎಂ
ಸಿದ್ದರಾಮಯ್ಯ ದಲಿತ ವಿರೋಧಿ ಎಂಬ ಬಿಜೆಪಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ರಾಜಕೀಯ ಷಡ್ಯಂತ್ರ. ಗುತ್ತಿಗೆದಾರರಿಗೆ ಮೀಸಲಾತಿ ನೀಡಿದ್ದು ಇದೇ ಸಿದ್ದರಾಮಯ್ಯ. ಎಸ್‍ಸಿಪಿ, ಟಿಎಸ್‍ಪಿ ಜಾರಿಗೆ ತಂದಿದ್ದು ಇದೇ ಸಿದ್ದರಾಮಯ್ಯ. ಎಸ್‍ಸಿ, ಎಸ್‍ಟಿಗೆ ನಾನು ವಿರುದ್ಧವಾಗಿಲ್ಲ. ನಮ್ಮ ಕಾಲದಲ್ಲಿ 88 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಆದರೆ ಅವರು 28 ಸಾವಿರ ಕೋಟಿ ಖರ್ಚು ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮಳೆ ಅವಾಂತರ – ನೀರಿನಲ್ಲಿ ಕೊಚ್ಚಿ ಹೋದ ಹಸುಗಳು, ಕೆರೆಯಲ್ಲಿ ಸಿಲುಕಿದ ಕುದುರೆ