ಹುಬ್ಬಳ್ಳಿ: ಸಿದ್ದರಾಮಯ್ಯ (Siddaramaiah) ನಿಮ್ಮ ನಾಲಗೆ ಹದ್ದುಬಸ್ತಿನಲ್ಲಿಡಿ ಎಂದು ಸಿಎಂ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಅವರಿಗೆ ಪುಡಾರಿ ಎಂದು ಮಾತನಾಡುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಇದ್ದ ಸಂಗತಿಯನ್ನು ಪ್ರಧಾನಿಗಳು ವಿಶ್ಲೇಷಣೆ ಮಾಡಿದ್ದಾರೆ. ಇದಕ್ಕೆ ಸೌಜನ್ಯಯುತವಾಗಿ ಸಮರ್ಥನೆ ಕೊಡಿ. ಅದನ್ನು ಬಿಟ್ಟು ಪುಡಾರಿ ಇತ್ಯಾದಿಯಾಗಿ ಮಾತನಾಡುವುದು ಸರಿಯಲ್ಲ. ಖರ್ಗೆ ಅವರು ಗ್ಯಾರಂಟಿ ಬಗ್ಗೆ ಹೇಳಿದ್ದಾರೆ. ಗ್ಯಾರಂಟಿಯಿಂದ ಅಭಿವೃದ್ಧಿ ಆಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ನಿಮ್ಮ ಶಾಸಕರೇ ನಿಮ್ಮ ವಿರುದ್ಧ ಮಾತನಾಡಿದ್ದಾರೆ. ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಬಿಆರ್ ಪಾಟೀಲ್, ಮತ್ತಿತರರು ಹೇಳಿದ್ದಾರೆ. ನಿಮ್ಮ ಶಾಸಕರೇ ಹೇಳುತ್ತಿರುವಾಗ ಪ್ರಧಾನ ಮಂತ್ರಿಗಳು ಅದರ ಬಗ್ಗೆ ಮಾತನಾಡಿದ್ದಾರೆ. ಸೌಜನ್ಯಯುತವಾಗಿ ಉತ್ತರ ಕೊಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ವಕ್ಫ್ ನೋಟಿಸ್ ಅನ್ನೋದೆ ಕಾನೂನು ಬಾಹಿರ: ಸಿ.ಟಿ ರವಿ
ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅಸಮಾಧಾನ ವಿಚಾರವಾಗಿ ಮಾತನಾಡಿ, ಖರ್ಗೆ ಅವರು ಅತ್ಯಂತ ಹಿರಿಯ ನಾಯಕರು. ರಾಜಕೀಯ ಭಿನ್ನಾಭಿಪ್ರಾಯ ಹೊರತುಪಡಿಸಿ, ಅವರೊಂದಿಗೆ ವೈಯಕ್ತಿಕ ಸಂಬಂಧ ಚೆನ್ನಾಗಿದೆ. ಅತ್ಯಂತ ಕಷ್ಟದಲ್ಲಿ ಬೆಳೆದು ಬಂದು, ಈ ಹಂತಕ್ಕೆ ಮುಟ್ಟಿದವರು. ಕಾಂಗ್ರೆಸ್ ಪಕ್ಷ ಮೊದಲು ಅಶೋಕ್ ಗೆಹ್ಲೋಟ್ ಅವರನ್ನ ಅಧ್ಯಕ್ಷರನ್ನ ಮಾಡಲು ಹೊರಟಿದ್ದರು. ಖರ್ಗೆ ಅವರು ಗಾಂಧಿ ಕುಟುಂಬದವರ ಮೊದಲ ಆಯ್ಕೆ ಆಗಿರಲಿಲ್ಲ. ಗೆಹ್ಲೋಟ್ ಹೈಕಮಾಂಡ್‌ಗೆ ಕೈಕೊಟ್ಟು ರೆಬಲ್ ಆದ್ರೂ ನಂತರ ಅನಿವಾರ್ಯವಾಗಿ ಗಾಂಧಿ ಕುಟುಂಬ ಖರ್ಗೆ ಅವರನ್ನ ಆಯ್ಕೆ ಮಾಡಿತು. ಈಗ ಅವರೇ ಹೇಳಿರುವ ಪ್ರಕಾರ, ಪ್ರತಿಯೊಂದಕ್ಕೂ ಗಾಂಧಿ ಕುಟುಂಬದ ಮಾತು ಕೇಳುವಂತಾಗಿದೆ. ದೊಡ್ಡ ಪ್ರಜಾಪ್ರಭುತ್ವ ಸಂವಿಧಾನವನ್ನು ತೆಗೆದುಕೊಂಡು ತಿರುಗಾಡುವವರು ಬೇರೆಯವರಿಗೆ ಎಷ್ಟು ಗೌರವ ಕೊಡುತ್ತಾರೆ ಎಂದು ತಿಳಿಯುತ್ತದೆ ಎಂದರು. ಇದನ್ನೂ ಓದಿ: ಗಾಂಜಾ ದಾಸ್ತಾನು ಇಟ್ಟುಕೊಂಡಿದ್ದ ಮನೆ ಮೇಲೆ ಪೊಲೀಸರ ದಾಳಿ – ಮೂವರ ಬಂಧನ
ವಕ್ಫ್ ರಾಷ್ಟ್ರೀಕರಣ ಮಾಡುವಂತಹ ಪ್ರಶ್ನೆಯೇ ಇಲ್ಲ. ವಕ್ಫ್ನಿಂದ ರೈತರಿಗೆ ಸಿಗುವ ಸಾಲ ಎಲ್ಲ ಬಂದ್ ಆಗಿಬಿಡುತ್ತದೆ. ಇದು ಬಹಳ ಅಪಾಯವಾದ್ದು, ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಇದನ್ನೆಲ್ಲ ಸರಿಪಡಿಸಬೇಕು. ವಿಶೇಷವಾಗಿ ಹಾವೇರಿಯಲ್ಲಿ ಏನು ಆದೇಶ ಹೊರಡಿಸಿದ್ದಾರೆ ಅದನ್ನು ಹಿಂಪಡೆಯಬೇಕು. ವಕ್ಫ್ ರಾಷ್ಟ್ರೀಕರಣ ಮಾಡುವಂತಹ ಪ್ರಶ್ನೆಯೇ ಇಲ್ಲ. ಅಪರಿಮಿತ ಅಧಿಕಾರವನ್ನು ರದ್ದುಗೊಳಿಸಲು ಕಾಂಗ್ರೆಸ್ (Congress) ಸರ್ಕಾರ ಸಹಕರಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ವಕ್ಫ್ ಆಸ್ತಿ ವಿವಾದ – ಸೋಮವಾರ ಬೃಹತ್ ಪ್ರತಿಭಟನೆಗೆ ಬಿಜೆಪಿ ಕರೆ
ವಕ್ಫ್ ಆಸ್ತಿ ಹೆಸರಲ್ಲಿ ಕಬಳಿಕೆ ಹುನ್ನಾರ ನಡೆದಿದೆ. ಇದರ ವಿರುದ್ಧ ಸೋಮವಾರ ಬಿಜೆಪಿಯಿಂದ ಹೋರಾಟ ಮಾಡುತ್ತೇವೆ. ವಕ್ಫ್ ಆಸ್ತಿ ನಮೂದು ಮಾಡಿರುವ ಜಾಗದಲ್ಲಿ ಮನೆಗಳಿವೆ. ಅವುಗಳನ್ನು ವಿಭಾಗ ಮಾಡಿಕೊಳ್ಳುವುದು ಕಷ್ಟ. ವಕ್ಫ್ ಎಂದು ನಮೂದಾದ ಆಸ್ತಿ ಮೇಲೆ ಸಾಲ ಪಡೆಯೋದು ಕಷ್ಟ. ಅದನ್ನು ಮಾರಾಟ ಮಾಡುವುದಕ್ಕೂ ಆಗುವುದಿಲ್ಲ. ಇಷ್ಟೆಲ್ಲ ಗೊಂದಲಗಳಿದ್ದರೂ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ನೋಟಿಸ್ ಮತ್ತು ಕಲಂ 11ರಲ್ಲಿ ನಮೂದು ಆಗಿರುವುದು ಗಂಭೀರ ವಿಷಯವಾಗಿದೆ. ಜನ ತಮ್ಮ ಪಹಣಿ ಪರಿಶೀಲನೆ ಮಾಡಿಕೊಳ್ಳಲಿ. ವಕ್ಫ್ ಕಾನೂನು ಹೆಸರಲ್ಲಿ ದುರ್ಬಳಕೆ ನಡೆದಿದೆ. ಹಾವೇರಿಯಲ್ಲಿ ರೈತರಿಗೆ ಕೊಟ್ಟ ನೋಟಿಸ್ ಕೂಡಲೇ ವಾಪಸ್ ಪಡೆಯಬೇಕು. ವಕ್ಫ್ ಆಸ್ತಿಗಳ ರಾಷ್ಟೀಕರಣ ಮಾಡಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ ಬರೆದಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಬಳ್ಳಾರಿಯಲ್ಲೂ ವಕ್ಫ್ ವಿವಾದ – ರೈತರ ಪಿತ್ರಾರ್ಜಿತ ಆಸ್ತಿಗೆ ನೋಟಿಸ್