– ಕೆಪಿಸಿಸಿ ಅಧ್ಯಕ್ಷ ಗಾದಿ ತ್ಯಾಗ ಮಾಡ್ತಾರಾ ಗುಂಡೂರಾವ್!
ಬೆಂಗಳೂರು: ಉಪ ಚುನಾವಣೆಯ ಸೋಲಿನ ಹೊಣೆ ಹೊತ್ತು ಮಾಜಿ ಸಿಎಂ ಸಿದ್ದರಾಮಯ್ಯನವರು ಸಿಎಲ್‍ಪಿ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮತದಾರರು ನೀಡಿರುವ ತೀರ್ಪನ್ನು ನಾನು ಒಪ್ಪಿಕೊಂಡಿದ್ದೇನೆ. ಕುದುರೆ ವ್ಯಾಪಾರಕ್ಕೆ ಒಳಗಾಗಿದ್ದವರಿಗೆ ಜನರು ಶಿಕ್ಷೆ ನೀಡುತ್ತಾರೆಂಬ ನಿರೀಕ್ಷೆ ಇತ್ತು. ಇಂದು ನನ್ನ ನಿರೀಕ್ಷೆ ಹುಸಿಯಾಗಿದ್ದು, ಜನಾದೇಶವನ್ನು ಒಪ್ಪಿಕೊಂಡಿದ್ದೇನೆ. ಕಾಂಗ್ರೆಸ್ ಶಾಸಕಾಂಗ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ವಿಪಕ್ಷ ನಾಯಕನಾಗಿ ಮುಂದುವರಿಯುತ್ತಿದ್ದೇನೆ. ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Advertisement
Advertisement
ಉಪ ಚುನಾವಣೆಯಲ್ಲಿ ಕಾಂಗ್ರೆಸ್ 15ರಲ್ಲಿ ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿದ್ದು, ಚುನಾವಣೆಯ ಉಸ್ತುವಾರಿ ಹೊತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನುವ ವಿಚಾರ ಸದ್ದು ಮಾಡಿತ್ತು. ಆದ್ರೆ ಸಿದ್ದರಾಮಯ್ಯನವರು ಸಿಎಲ್ ಪಿ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ವಿಪಕ್ಷ ನಾಯಕರಾಗಿ ಮುಂದುವರಿಯಲಿದ್ದಾರೆ. ಇದರ ಜೊತೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡುತ್ತಾರೆ ಎನ್ನಲಾಗುತ್ತಿದೆ.
Advertisement
I have resigned as Congress Legislative Party leader- Siddaramaiah #KarnatakaByelection #KarnatakaBypolls #KarnatakaByPollResults pic.twitter.com/d02l90hC6O
— PublicTV (@publictvnews) December 9, 2019
Advertisement
15 ಕ್ಷೇತ್ರಗಳಲ್ಲಿಯೂ ಸಿದ್ದರಾಮಯ್ಯನವರು ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಟಿಕೆಟ್ ಕೊಡಿಸಿದ್ದ 13 ಜನರನ್ನು ಗೆಲ್ಲಿಸುವಲ್ಲಿ ಸಿದ್ದರಾಮಯ್ಯನವರು ವಿಫಲರಾಗಿದ್ದಾರೆ. ಯಾವುದೇ ಚರ್ಚೆ ನಡೆಸದೇ ಸಿದ್ದರಾಮಯ್ಯನವರು ಆಪ್ತರಿಗೆ ಟಿಕೆಟ್ ಕೊಡಿಸಿದ್ದಾರೆ ಎಂದು ಮುನಿಸಿಕೊಂಡಿದ್ದ ಕಾಂಗ್ರೆಸ್ ಹಿರಿಯ ನಾಯಕರು ಚುನಾವಣೆ ಪ್ರಚಾರದಿಂದ ದೂರವೇ ಉಳಿದುಕೊಂಡಿದ್ದರು. ಮೈತ್ರಿ ಸರ್ಕಾರ ಪತನದ ಬಳಿಕ ಸಿದ್ದರಾಮಯ್ಯನವರ ನಾಯಕತ್ವದ ಬಗ್ಗೆ ಮೂಲ ಕಾಂಗ್ರೆಸ್ಸಿಗರು ಪ್ರಶ್ನೆ ಮಾಡಿದ್ದರು. ಹೀಗೆ ಮೂಲ ಕಾಂಗ್ರೆಸ್ ಮತ್ತು ವಲಸಿಗ ಕಾಂಗ್ರೆಸ್ ಎಂಬ ಎರಡು ಬಣಗಳು ರಾಜ್ಯ ಕೈಕೂಟದಲ್ಲಿ ಹುಟ್ಟುಕೊಂಡಿದ್ದವು.
ಆಂತರಿಕ ಕಲಹ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಏಕಾಂಗಿಯಾಗಿ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮತ ಯಾಚಿಸಿದ್ದರು. ಹುಣಸೂರಿನಲ್ಲಿ ಹೆಚ್.ಪಿ. ಮಂಜುನಾಥ್ ಮತ್ತು ಶಿವಾಜಿ ನಗರದಲ್ಲಿ ರಿಜ್ವಾನ್ ಅರ್ಷದ್ ಮಾತ್ರ ಗೆಲುವಿನ ನಗೆ ಬೀರಿದ್ದಾರೆ.
ಉಪ ಚುನಾವಣಾ ಫಲಿತಾಂಶ ಹೊರ ಬೀಳುವ ಮೊದಲೇ ಕಾಂಗ್ರೆಸ್ ನಾಯಕರು ರಹಸ್ಯ ಸಭೆ ನಡೆಸಿದ್ದರು. ಡಿಸೆಂಬರ್ 11 ಅಥವಾ 12 ರಂದು ಮೂಲ ಕಾಂಗ್ರೆಸ್ಸಿಗರ ದಂಡು ದೆಹಲಿಗೆ ದೌಡಾಯಿಸಿ ಹೈಕಮಾಂಡ್ ಗೆ ಸಿದ್ದರಾಮಯ್ಯನವರ ವಿರುದ್ಧ ದೂರು ಸಲ್ಲಿಸಲು ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ.
ಮೂಲ ಕಾಂಗ್ರೆಸ್ ನಾಯಕರಾದ ಬಿ.ಕೆ.ಹರಿಪ್ರಸಾದ್, ಜಿ.ಸಿ.ಚಂದ್ರಶೇಖರ್, ಪ್ರೊ.ರಾಜೀವ್ ಗೌಡ, ಮಾಜಿ ಕೇಂದ್ರ ಸಚಿವ ಮುನಿಯಪ್ಪ, ಮಾಜಿ ಸಚಿವರಾದ ಮೋಟಮ್ಮ, ರಾಣಿ ಸತೀಶ್ ಸೇರಿದಂತೆ ಹಿರಿಯ ನಾಯಕರಿಂದ ಶನಿವಾರ ಸಂಜೆ ಬೆಂಗಳೂರಿನಲ್ಲಿ ಗುಪ್ತ ಸಭೆ ನಡೆದಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ತಮಗಿಷ್ಟ ಬಂದವರಿಗೆ ಟಿಕೆಟ್ ಕೊಡಿಸಿಕೊಂಡು ಯಾವ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಕ್ಷದ ಹಿನ್ನಡೆಗೆ ಸಿದ್ದರಾಮಯ್ಯ ಅವರೇ ಕಾರಣ ಎಂದು ದೂರು ಕೊಡಲು ರೆಡಿಯಾಗಿದ್ದಾರೆ. ಅಲ್ಲದೆ ಸತತ ಸೋಲು ಹಾಗೂ ಹಿನ್ನಡೆ ಆಗುತ್ತಿದ್ದರೂ ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರಂತೆ ವರ್ತಿಸುತಿದ್ದಾರೆ ಎಂದು ಆರೋಪ ಕೂಡ ಮಾಡಿದ್ದಾರೆ. ಸಿಎಲ್‍ಪಿ ನಾಯಕನ ಸ್ಥಾನ ಅಥವಾ ವಿಪಕ್ಷ ನಾಯಕನ ಸ್ಥಾನ ಒಂದರಿಂದ ತಲೆದಂಡ ಮಾಡುವಂತೆ ಹೈ ಕಮಾಂಡ್ ಮುಂದೆ ಪಟ್ಟು ಹಿಡಿಯಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.