ಬಳ್ಳಾರಿ: ರಾಜಕೀಯದಲ್ಲಿ ನಿನ್ನೆ ಒಂದು ಪಕ್ಷದಲ್ಲಿ ಇದ್ದವರು ಇಂದು ಬೇರೆ ಪಕ್ಷಕ್ಕೆ ಹೋಗೋದು ಸಾಮಾನ್ಯವಾಗಿದೆ. ಆದರೆ ಅಕ್ರಮ ಗಣಿಗಾರಿಕೆ ಮಾಡಿ ಜೈಲಿಗೆ ಹೋದಾಗ ಅವರ ವಿರುದ್ಧ ತೊಡೆತಟ್ಟಿದ್ದ ಸಿದ್ದರಾಮಯ್ಯ ಇದೀಗ ಅವರನ್ನೇ ಪಕ್ಷಕ್ಕೆ ಸೇರಿಸಿಕೊಂಡು ಅವರಿಂದಲೇ ಸನ್ಮಾನ ಮಾಡಿಸಿಕೊಂಡಿದ್ದಾರೆ.
ಜನಾರ್ದನ ರೆಡ್ಡಿ ಬಲಗೈ ಬಂಟನೆಂದು ಪ್ರಖ್ಯಾತಿಯನ್ನು ಪಡೆದು ಅಕ್ರಮ ಗಣಿಗಾರಿಕೆಯ ಕೇಂದ್ರ ಬಿಂದುವಾಗಿದ್ದ ಖಾರದಪುಡಿ ಮಹೇಶ ಗುರುವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯನವರಿಗೆ ಸನ್ಮಾನ ಮಾಡಿದ್ದಾರೆ.
Advertisement
Advertisement
ಮಹೇಶ ಹೊಸಪೇಟೆ ನಗರ ಸಭೆ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದು, ಈಗಾಗಲೇ ಕಾಂಗ್ರೆಸ್ಸಿನ ಹಲವು ನಾಯಕರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದು ಬಂದಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಿಂದ ಬಳ್ಳಾರಿವರೆಗೂ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಿದ್ದರು. ಆಗ ಇದೇ ಖಾರದಪುಡಿ ಮಹೇಶ ಪಾದಯಾತ್ರೆ ಉದ್ದಕ್ಕೂ ತಮ್ಮ ಬೆಂಬಲಿಗರನ್ನು ಬಿಡುವ ಮೂಲಕ ಭಯವನ್ನು ಸೃಷ್ಠಿ ಮಾಡಿದ್ದರು. ಇದನ್ನು ಸ್ವತಃ ಸಿದ್ದರಾಮಯ್ಯ ಬಳ್ಳಾರಿಗೆ ಬಂದಾಗ ಸಾಕಷ್ಟು ಬಾರಿ ಪ್ರಸ್ತಾಪ ಮಾಡಿದ್ದರು.
Advertisement
ವಿರೋಧ ಪಕ್ಷದ ನಾಯಕರಾಗಿದ್ದಾಗ ಮಹೇಶ ಅವರ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ಸಂಡೂರಿನಲ್ಲಿ ತಡೆದಿದ್ದರು. ಇದೀಗ ಅದೆಲ್ಲವನ್ನು ಮರೆತಿರುವ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿರುವ ಮತ್ತು ಹಲವು ಕೇಸ್ ಇರುವ ಮಹೇಶ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡಲು ಸಜ್ಜಾಗಿದ್ದಾರೆ. ಇದಕ್ಕೆ ಆನಂದ್ ಸಿಂಗ್ ಅವರ ಬೆಂಬಲವಿದೆ ಎಂದು ತಿಳಿದು ಬಂದಿದೆ.