– ಮೋದಿ ಸರ್ಕಾರ 10 ವರ್ಷಗಳಲ್ಲಿ ಕರ್ನಾಟಕಕ್ಕೆ 4.91 ಲಕ್ಷ ಕೋಟಿ ರೂ. ಅನುದಾನ ಕೊಟ್ಟಿದೆ
– ಪಾಕಿಸ್ತಾನದವರು ಬಾಂಬ್ ಹಾಕಿ ಹೋದರೂ ಮನಮೋಹನ್ ಸಿಂಗ್ ಸುಮ್ಮನಿದ್ದರು
– ಕಾಂಗ್ರೆಸ್, I.N.D.I.A ಒಕ್ಕೂಟದ ವಿರುದ್ಧ ಅಮಿತ್ ಶಾ ವಾಗ್ದಾಳಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಖುರ್ಚಿ ಉಳಿಸಿಕೊಳ್ಳುವುದೇ ಚಿಂತೆಯಾಗಿದೆ. ಏಕೆಂದರೆ ಇನ್ನೊಬ್ಬರು ಸಿಎಂ ಕುರ್ಚಿ ಎಳೆಯುತ್ತಿದ್ದಾರೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ, ಸಿಎಂ-ಡಿಕೆಶಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
Advertisement
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ-ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ `ನನ್ನ ತೆರಿಗೆ ನನ್ನ ಹಕ್ಕು’ ಕಾಂಗ್ರೆಸ್ ಬೇಡಿಕೆಗೆ ತಿರುಗೇಟು ನೀಡಿದರು. 10 ವರ್ಷಗಳಲ್ಲಿ ಯುಪಿಎ ಕೇವಲ 1.52 ಲಕ್ಷ ಕೋಟಿ ರೂ. ಅನುದಾನ ಮಾತ್ರ ರಾಜ್ಯಕ್ಕೆ ಕೊಟ್ಟಿತ್ತು. ಆದ್ರೆ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ 4.91 ಲಕ್ಷ ಕೋಟಿ ರೂ. ಅನುದಾನ ಕೊಟ್ಟಿದೆ. ಇದು 3 ಪಟ್ಟು ಹೆಚ್ಚಿದೆ ಎಂದು ಹೇಳಿದರು.
Advertisement
Advertisement
ರಾಹುಲ್ ಪರ ಸಂಸದನ ಮನೆಯಲ್ಲಿ 350 ಕೋಟಿ ರೂ. ಸಿಕ್ಕಿದೆ:
ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಪ್ರಜಾಪ್ರಭುತ್ವ ಉಳಿಸಿ ಅಂತಿದ್ದಾರೆ, ಪ್ರಜಾಪ್ರಭುತ್ವಕ್ಕೆ ಏನಾಗಿದೆ? 2014ರ ವರೆಗೆ ಭ್ರಷ್ಟಾಚಾರ ನಡೆಯುತ್ತಿತ್ತು. ಭ್ರಷ್ಟಾಚಾರಿಗಳನ್ನ ಜೈಲಿಗೆ ಹಾಕುವ ವಾಗ್ದಾನ ಕೊಟ್ಟಿದ್ದೆವು. ಆ ಕೆಲಸ ಆಗ್ತಿದೆ. ರಾಹುಲ್ ಗಾಂಧಿ ಪರ ಸಂಸದನ ಮನೆಯಲ್ಲಿ 350 ಕೋಟಿ ರೂಪಾಯಿ ಸಿಗುತ್ತೆ, ಮಮತಾ ಬ್ಯಾನರ್ಜಿ ಪಕ್ಷದ ನಾಯಕನ ಮನೆಯಲ್ಲಿ 51 ಕೋಟಿ ರೂಪಾಯಿ ಸಿಕ್ಕಿದೆ. ಅಂತಹವರನ್ನ ಜೈಲಿಗೆ ಹಾಕದೇ ಅರಮನೆಯಲ್ಲಿ ಇಡಬೇಕಾ ಎಂದು ಪ್ರತಿಪಕ್ಷ ನಾಯಕರ ಟೀಕೆಗೆ ತಿರುಗೇಟು ನೀಡಿದರು.
Advertisement
ಸಿದ್ದರಾಮಯ್ಯ ವಿರುದ್ಧ ಕೆಂಡ:
ಮೋದಿ ಸಿಎಎ ಜಾರಿಗೆಗೊಳಿಸಿದಾಗ ಅದನ್ನೂ ಕಾಂಗ್ರೆಸ್ ಜನ ವಿರೋಧಿಸಿದರು. ಯುಪಿಎ 10 ವರ್ಷ ಅಧಿಕಾರದಲ್ಲಿದ್ದಾಗ ಏನಾಯ್ತು ಅನ್ನೋದನ್ನ ಸಿದ್ದರಾಮಯ್ಯ ವಿವರಿಸಲಿ. ಪಾಕಿಸ್ತಾನದಿಂದ ಬಂದು ಬಾಂಬ್ ಹಾಕಿ ಹೋಗ್ತಿದ್ದರೂ, ಅಂದಿನ ಮನಮೋಹನ್ ಸಿಂಗ್ ಮೌನವಾಗಿದ್ದರು. ಆದ್ರೆ ಮೋದಿ ಅವರು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿಸಿದರು. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ. ದೇಶದ ಆರ್ಥಿಕತೆ 11ನೇ ಸ್ಥಾನದಲ್ಲಿ ಇತ್ತು, ಈಗ 5ನೇ ಸ್ಥಾನಕ್ಕೆ ಬಂದಿದೆ. ಮತ್ತೊಮ್ಮೆ ಮೋದಿಯನ್ನ ಗೆಲ್ಲಿಸಿದರೆ, ದೇಶ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಶ್ಲಾಘಿಸಿದರು.
ಮೋದಿ ಎಂಬ ಭಾವದಿಂದ ಮತ ಕೇಳಿ:
ಲೋಕಸಭಾ ಚುನಾವಣೆ ತಯಾರಿಗಾಗಿ ಮೋದಿ ನೇತೃತ್ವದಲ್ಲಿ ಚುನಾವಣಾ ಕಣದಲ್ಲಿದ್ದೇವೆ. ಆದ್ರೆ ಮತ್ತೊಂದು ಕಡೆ ಪರಿವಾರ ವಾದ, ಭ್ರಷ್ಟಾಚಾರ ತುಂಬಿರುವ ಐ.ಎನ್.ಡಿ.ಐ.ಎ ಒಕ್ಕೂಟ ಇದೆ. ಎಲ್ಲೇ ಹೋದರೂ ಮೋದಿ ಮೋದಿ ಹೆಸರು ಕೇಳಿ ಬರ್ತಿದೆ. ಕರ್ನಾಟಕದಲ್ಲಿ 2014 ರಲ್ಲಿ ಬಿಜೆಪಿಗೆ 43% ಮತ ಕೊಡೋ ಮೂಲಕ ಗೆಲ್ಲಿಸಿದ್ರಿ, ಈ ಸಲ 60% ಮತ ಕೋಡೋ ಮೂಲಕ ಕರ್ನಾಟಕದ 28 ಕ್ಷೇತ್ರಗಳಲ್ಲಿಯೂ ಗೆಲ್ಲಿಸಬೇಕು. ಬೂತ್ ಮಟ್ಟದ ಪ್ರತಿಯೊಬ್ಬ ಕಾರ್ಯಕರ್ತರು ಸಹ ಮೋದಿ ಎಂಬ ಭಾವನೆಯಿಂದ ಮತ ಕೇಳಿ ಎಂದು ಕರೆ ಕೊಟ್ಟರು.
ಮೋದಿ ಗುಜರಾತ್ ಸಿಎಂ ಆಗಿದ್ದ ಅವಧಿಯಲ್ಲಿ 25 ಪೈಸೆಯಷ್ಟೂ ಭ್ರಷ್ಟಾಚಾರ ಆರೋಪ ಮಾಡಲು ವಿಪಕ್ಷಗಳಿಗೆ ಸಾಧ್ಯವಾಗಲಿಲ್ಲ. ಆದ್ರೆ 10 ವರ್ಷ ಯುಪಿಎ ಅವಧಿಯಲ್ಲಿ 12 ಲಕ್ಷ ಕೋಟಿ ಮೊತ್ತದ ಅಕ್ರಮ ನಡೆದಿದೆ. ಡಿಕೆ ಶಿವಕುಮಾರ್‌ಗೂ ಭ್ರಷ್ಟಾಚಾರಕ್ಕೂ ಬಿಡದ ನಂಟಿದೆ. ಇಂತಃ ಭ್ರಷ್ಟ ಕಾಂಗ್ರೆಸ್ ಮೋದಿ ಎದುರು ನಿಂತಿದೆ ಎಂದು ಹೇಳಿದರು.
ಭ್ರಷ್ಟಾಚಾರ ಮಾಡೋರು ಜನಸೇವೆ ಮಾಡಲ್ಲ:
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅಮಿತ್ ಶಾ, ಭ್ರಷ್ಟಾಚಾರ ಮಾಡೋರು ಯಾವತ್ತಿಗೂ ಜನಸೇವೆ ಮಾಡಲ್ಲ. ಮೋದಿ 10 ಲಕ್ಷ ಮಹಿಳೆಯರಿಗೆ ಉಜ್ವಲ ಗ್ಯಾಸ್ ಕೊಟ್ಟಿದ್ದಾರೆ, 14 ಲಕ್ಷ ಜನರಿಗೆ ನಲ್ಲಿ ನೀರು, 60 ಲಕ್ಷ ಬಡವರಿಗೆ 5 ಲಕ್ಷ ರೂ.ವರೆಗೆ ವಿಮೆ ಸಿಗುವಂತೆ ಮಾಡಿ ಬಡವರಿಗೆ ಹೊಸ ಜೀವನೋತ್ಸಾಹ ತುಂಬಿದ್ದಾರೆ. 370ನೇ ವಿಧಿ ರದ್ದು ಮಾಡಿದ್ದಾರೆ. 370ನೇ ವಿಧಿ ರದ್ದು ಮಾಡಿದಾಗ ಕಾಂಗ್ರೆಸ್ ರಕ್ತದ ಹೊಳೆ ಹರಿಯುತ್ತದೆ ಎಂದಿದ್ದರು, ಆದರೀಗ ಒಂದು ಸಣ್ಣ ಕಲ್ಲೂ ಸಹ ಹೊಡೆಯಲಾಗುತ್ತಿಲ್ಲ ಎಂದು ತಿರುಗೇಟು ನೀಡಿದರು.
ಅಷ್ಟೇ ಅಲ್ಲ ಶತಮಾನಗಳಿಂದ ಬಗೆಹರಿಯದ ಸಮಸ್ಯೆಗೆ ಮೋದಿ ಅವರ ಕಾಲದಲ್ಲಿ ಪರಿಹಾರ ಸಿಕ್ಕಿತು. ಮೋದಿಯವರು ರಾಮಮಂದಿರ ಕಟ್ಟಿಸಿ, ಪ್ರಾಣಪ್ರತಿಷ್ಠಾಪನೆಯನ್ನೂ ನೇರವೇರಿಸಿದರು. ಸೋನಿಯಾ, ರಾಹುಲ್, ಖರ್ಗೆ ಎಲ್ಲರಿಗೂ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನ ನೀಡಲಾಗಿತ್ತು. ಆದ್ರೆ ವೋಟ್ ಬ್ಯಾಂಕ್ ಹೋಗಿಬಿಡುತ್ತೆ ಅನ್ನೋ ಭಯದಿಂದ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೂ ಬರಲಿಲ್ಲ ಎಂದು ತಿವಿದರು.