ಬಾಗಲಕೋಟೆ: ಮುದುಕಿ ಯೌವ್ವನದಲ್ಲಿನ ತನ್ನ ತುರುಬು ನೆನೆಸಿಕೊಂಡ ಹಾಗೆಯೇ ಸಿದ್ದರಾಮಯ್ಯ ತಾನೇ ಸಿಎಂ ಎಂದು ಓಡಾಡುತ್ತಿದ್ದಾರೆ. ಆದರೆ ಅವರು ಈ ಜನ್ಮದಲ್ಲಿ ಮತ್ತೆ ಮುಖ್ಯಮಂತ್ರಿ ಆಗಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಕಾಂಗ್ರೆಸ್ ಚೇಲಾ ಶಾಸಕರಿಂದ ಸಿದ್ದರಾಮಯ್ಯ ಸಿಎಂ ಎಂದು ಹೇಳಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಿರುಕನ ಕನಸು ಕಾಣುತ್ತಿದ್ದಾರೆ. ರಾಹುಲ್ ಗಾಂಧಿ ಹೇಗೆ ಈ ಜನ್ಮದಲ್ಲಿ ಮದುವೆ ಆಗಲ್ವೋ, ಹಾಗೆಯೇ ಸಿದ್ದರಾಮಯ್ಯ ಈ ಜನ್ಮದಲ್ಲಿ ಮತ್ತೆ ಸಿಎಂ ಆಗಲ್ಲ. ಹಾಗಾಗಿ ಸಿಎಂ ಆಗುವ ಹುಚ್ಚು ಕನಸಿನಿಂದ ಸಿದ್ದರಾಮಯ್ಯ ಹೊರ ಬರಬೇಕು ಎಂದು ಈಶ್ವರಪ್ಪ ತಿಳಿಸಿದ್ದಾರೆ.
ಸಿದ್ದರಾಮಯ್ಯ ಜೆಡಿಎಸ್‍ನಿಂದ ಉಚ್ಛಾಟನೆ ಆದಂತೆ ಕಾಂಗ್ರೆಸ್ ನಿಂದಲೂ ಅಮಾನತು ಆಗುತ್ತಾರೆ. ದಿನೇಶ್ ಗುಂಡೂರಾವ್ ಒಬ್ಬ ಬಟ್ಟೆ ಹಾವು. ಅವರು ಸಿದ್ದರಾಮಯ್ಯ ಚೇಲಾಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ ಎಂದು ಹೇಳಿಕೆ ಕೊಟ್ಟ ಶಾಸಕರಿಗೆ ನೋಟಿಸ್ ಕೊಟ್ಟಿಲ್ಲ. ಬದಲಾಗಿ ವಿಶ್ವನಾಥ್ ವಿರುದ್ಧ ಗುಂಡೂರಾವ್ ಹರಿಹಾಯ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ತಾಕತ್ತಿದ್ದರೆ ಈಶ್ವರಪ್ಪ ಸಿಎಂ ಎಂದು ಹೇಳಲಿ ಎಂಬ ಸಿದ್ದರಾಮಯ್ಯ ಸವಾಲಿಗೆ ತಿರುಗೇಟು ನೀಡಿದ ಅವರು, ಬಿಜೆಪಿ ಶಿಸ್ತಿನ ಪಕ್ಷ, ನಾಟಕದ ಪಕ್ಷವಲ್ಲ. ಲೋಕಸಭಾ ಚುನಾವಣೆಯಲ್ಲಿ ಜನರ ಒಲವು ಬಿಜೆಪಿ ಮೇಲಿದೆ. ಮತ್ತೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಹಾಗೆಯೇ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಗಿಂತ ಬಿಜೆಪಿ ಹೆಚ್ಚು ಸ್ಥಾನ ಗಳಿಸಲಿದೆ. ರಾಜ್ಯದಲ್ಲಿ 104 ಸ್ಥಾನ ಪಡೆದಿರುವ ಬಿಜೆಪಿ ಲೋಕಸಭಾ ಚುನಾವಣೆ ಬಳಿಕ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೇ 23 ನಂತರ ಸಿದ್ದರಾಮಯ್ಯ ಎಲ್ಲಿ ಇರುತ್ತಾರೆ ಎಂದು ನೋಡುತ್ತಾ ಇರಿ. ಸಿದ್ದರಾಮಯ್ಯಗೆ ವಯಸ್ಸಾಗಿ ಹೋಗಿದೆ. ಆದರೂ ಮುದುಕಿಯಂತೆ ತುರುಬು ಕಟ್ಟಿಕೊಳ್ಳೋಕೆ ಹೋಗುತ್ತಿದ್ದಾರೆ. ಸಿದ್ದರಾಮಯ್ಯ ನಾಲಿಗೆ ಮೇಲೆ ಏನಿದೆಯೋ ನನಗೆ ಗೊತ್ತಿಲ್ಲ. ಬಾಯಿಗೆ ಬಂದ ಹಾಗೆ ಮಾತಾಡುತ್ತಾರೆ. ಬಿಎಸ್ ವೈಗೆ, ಪ್ರಧಾನಿ ಮೋದಿಗೆ ಅವನು ಇವನು ಎಂದು ಹೇಳುತ್ತಾರೆ. ಶೋಭಾ ಕರಂದ್ಲಾಜೆಗೆ ಅವಳು ಇವಳು ಅಂತಾರೆ ಎಂದು ಗರಂ ಆದರು.
ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತೇನೆ ಎಂಬ ಹುಚ್ಚು ಬಿಡಲಿ. ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಕಾಟದಿಂದ ವರ್ಷವಿಡೀ ಕಣ್ಣೀರು ಹಾಕಿದರು. ಕಾಂಗ್ರೆಸ್ ಜೆಡಿಎಸ್‍ನಲ್ಲಿ ಇನ್ನೂ ಬಹಳ ಜನ ಅತೃಪ್ತರಿದ್ದಾರೆ. ಅವರು ಬಹಿರಂಗವಾಗಿ ಬಾಯಿ ಬಿಡುತ್ತಿಲ್ಲ. ಸದ್ಯ ರಮೇಶ್ ಜಾರಕಿಹೊಳಿ ಮಾತ್ರ ಮಾತಾಡುತ್ತಿದ್ದಾರೆ. ಲೋಕಸಭೆ ಫಲಿತಾಂಶದ ನಂತರ ಮೋದಿ ಮತ್ತೆ ಪಿಎಂ ಆಗುತ್ತಾರೆ. ರಾಜ್ಯದಲ್ಲಿ ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತಾರೆ ಎಂದು ಹೇಳಿದರು.