ಬೆಂಗಳೂರು: ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಖಂಡಿತ ಕಾರಣ ಅಲ್ಲ, ಸರ್ಕಾರ ಬೀಳಲು ಎರಡೂ ಪಕ್ಷಗಳೂ ಕಾರಣ. ಆಡಳಿತ ನಡೆಸುವವರು ಸರಿಯಾಗಿ ನಡೆಸಬೇಕಿತ್ತು ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಕೆಪಿಎಸ್‍ಸಿ ಸದಸ್ಯರಾಗಿ ಮಾಡಿ ಎಂದು ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದರು. ಆದರೆ ಕುಮಾರಸ್ವಾಮಿ ಮಾಡಲಿಲ್ಲ. ಬಜೆಟ್ ಅನುದಾನವನ್ನು ಯಾರಿಗೆ ಎಷ್ಟು ನೀಡಿದ್ದಾರೆ ಎಂದು ಪರಿಶೀಲಿಸಿಕೊಳ್ಳಲಿ. ಬಜೆಟ್ ಅನುದಾನ ಕಾಂಗ್ರೆಸ್‍ನವರಿಗಿಂತ ಜೆಡಿಎಸ್ ಶಾಸಕರಿಗೆ ಹೆಚ್ವು ಸಿಕ್ಕಿದೆ. ಸಿದ್ದರಾಮಯ್ಯ ಶಾಸಕರನ್ನು ಮುಂಬೈಗೆ ಕಳುಹಿಸಿಲ್ಲ. ಅವರೇ ಶಾಸಕರನ್ನು ಮುಂಬೈಗೆ ಕಳುಹಿಸಿದ್ದಾರೆ ಎನ್ನುವುದಾದರೆ, ಜೆಡಿಎಸ್ ಶಾಸಕರನ್ನೂ ಅವರೇ ಕಳುಹಿಸಿದ್ದಾರಾ ಎಂದು ಪ್ರಶ್ನಿಸಿದರು.
ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಅಲ್ಲ, ಆಡಳಿತ ನಡೆಸೋರು ಸರಿಯಾಗಿ ನಡೆಸಬೇಕಿತ್ತು. ಅವರು ಸರಿಯಾಗಿ ಆಡಳಿತ ನಡೆಸಿದ್ದರೆ ಸರ್ಕಾರ ಬೀಳುತ್ತಿರಲಿಲ್ಲ. ಶಾಸಕರು ಮುಂಬೈಗೆ ಹೋಗುವ ಕುರಿತು ಕುಮಾರಸ್ವಾಮಿಯವರಿಗೆ ಮಾಹಿತಿ ಇತ್ತಲ್ಲ. ಅವರೇಕೆ ತಡೆಯಲಿಲ್ಲ, ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ ಅವರು ಸಿದ್ದರಾಮಯ್ಯ ಆಪ್ತರಲ್ಲ. ಸೋಮಶೇಖರ್ ಮೊದಲಿಂದಲೂ ಕಾಂಗ್ರೆಸ್‍ನಲ್ಲಿದ್ದವರು. ಶಾಸಕ ಮುನಿರತ್ನ ಬಿ.ಕೆ.ಹರಿಪ್ರಸಾದ್ ಬೆಂಬಲಿಗರು ಎಂದು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದರು.
ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯರನ್ನು ಸಿದ್ದರಾಮಯ್ಯ ಕಳಿಸಿದ್ದಾರಾ, ಕುಮಾರಸ್ವಾಮಿಗೆ ಹೇಳೋದಕ್ಕೇನು ಎಲ್ಲವನ್ನೂ ಹೇಳುತ್ತಾರೆ. ಲೋಕಸಭೆ ಚುನಾವಣೆ ನಂತರ ಜಾತ್ಯಾತೀತ ಪಕ್ಷಗಳು ಒಂದಾಗಬೇಕು ಎಂದು ಮೈತ್ರಿ ಮಾಡಿಕೊಂಡೆವು. ಬಳಿಕ ಮೈತ್ರಿ ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳು, ವ್ಯತ್ಯಾಸಗಳಾದವು. ಅವುಗಳನ್ನು ಸರಿಪಡಿಸಿಕೊಳ್ಳಬೇಕಿತ್ತು. ಆದರೆ ಸರಿಪಡಿಸಿಕೊಳ್ಳಲಿಲ್ಲ, ಹೀಗಾಗಿ ಅದು ಕೈಮೀರಿ ಹೋಗಿ ಸರ್ಕಾರ ಬೀಳುವ ಹಂತ ತಲುಪಿತು ಎಂದು ತಿಳಿಸಿದರು.