ಚಾಮರಾಜನಗರ: ನನ್ನ ರಾಜಕೀಯ ಜೀವನದಲ್ಲಿ ಯಾರ ಬಗ್ಗೆಯೂ ಮಾತಾನಾಡಿಲ್ಲ. ಮಾತನಾಡಿದರೆ ಅದು ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತ್ರ ಎಂದು ಬಿಜೆಪಿ ನಾಯಕ ವಿ. ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಗಿಡುಗ ಇದ್ದ ಹಾಗೆ. ಗಿಡುಗ ಹಾರಿಕೊಂಡು ಹೋಗಬಹುದು, ಆದ್ರೆ ಕಾಳು ತಿನ್ನೋಕೆ ಕೆಳಗೆ ಬರಲೇಬೇಕು. ನಿಮ್ಮ ಅಧಿಕಾರದ ದಾಹ ಮುಗಿದ ಮೇಲೆ ಕೆಳಗೆ ಇಳಿಯಬೇಕು. ಏನ್ ಆಯ್ತು ನಿಮಗೆ ಈಗ? ಸಿದ್ದರಾಮಯ್ಯ ಅಂದ್ರೆ ಉಡಾಫೆ ಸಿದ್ದರಾಮಯ್ಯ ಅಂತ ವ್ಯಂಗ್ಯವಾಡಿದರು.
Advertisement
Advertisement
ಉಪಚುನಾವಣೆಯಲ್ಲಿ ದೇವೇಗೌಡರು ಸಿದ್ದರಾಮಯ್ಯ ಅವರನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಪಟ್ಟರು. ಆಗ ನನ್ನ ಹತ್ತಿರ ಸಿದ್ದರಾಮಯ್ಯ ಬಂದು, ನನ್ನ ಪರ ಕೆಲಸ ಮಾಡಿ ಎಂದು ಕೇಳಿಕೊಂಡರು. ಆಗ ನಾನು ನಿಮ್ಮ ಪರ ಕೆಲಸ ಮಾಡಲಿಲ್ಲವೇ? ನಾನು ಇಲ್ಲ ಅಂದ್ರೆ ಅವತ್ತೆ ಕಳೆದು ಹೋಗುತ್ತಿದ್ದಿರಿ. ಆಗ ನೀವು ಅಹಿಂದ ಕಟ್ಟಿದಾಗ ನಿಮ್ಮ ಜೊತೆ ಇದ್ದವರೇ 5 ಜನ, ಅದರಲ್ಲಿ ನಾನು ನಿಮ್ಮ ಅಹಿಂದವನ್ನು ಉದ್ಘಾಟನೆ ಮಾಡಿದ್ದೆ. ನಾನು ನೀವು ಮುಖ್ಯಮಂತ್ರಿ ಆಗುವವರೆಗೂ ಜೊತೆಗಿದ್ದೆ. ಆದ್ರೆ ನೀವು ಮುಖ್ಯಮಂತ್ರಿ ಆದ ಮೇಲೆ ಎಲ್ಲಾ ಮರೆತು ಬಿಟ್ಟಿದ್ದೀರಿ ಎಂದು ಕಿಡಿಕಾರಿದರು.
Advertisement
Advertisement
ಮಂತ್ರಿಮಂಡಲ ಪುನಾರಚನೆ ಮಾಡುವ ನೆಪ ಹೇಳಿ ನನ್ನನ್ನು ಕೈ ಬಿಟ್ಟಿದ್ದೀರಿ. ನನ್ನ ಅನುಭವವನ್ನು ಬಳಸಿಕೊಳ್ಳಲು ಆಗಲಿಲ್ಲ. ನನ್ನನ್ನು ಏನು ಕೇಳದೇ ಮಂತ್ರಿ ಮಂಡಲದಿಂದ ತೆಗೆದು ಹಾಕಿದಿರಿ. ನಾನು ರಾಜಕೀಯಕ್ಕೆ ಬಂದಾಗ ನೀವು ಎಲ್ಲಿ ಇದ್ರಿ? ನಾನು ಬಂದಾಗ ನೀವು ಕಾನೂನು ಪದವಿ ಓದುತ್ತಿದ್ರೆನೋ ಎಂದು ಟಾಂಗ್ ಕೊಟ್ಟರು.
ಕುಮಾರಸ್ವಾಮಿ ಅಪ್ಪನ ಆಣೆಗೂ ಮುಖ್ಯಮಂತ್ರಿ ಆಗಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದರು. ಅವರದ್ದು ಅಪ್ಪ ಮಕ್ಕಳ ಪಕ್ಷ ಅವರ ಅಪ್ಪನ ಆಣೆಗೂ ಅವರು ಬದಲಾಗಲ್ಲ ಅಂದಿದ್ದರು. ಆದ್ರೆ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುವಾಗ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು, ನಾಯಕರು ಬಂದಿದ್ದರು. ಆಗ ನೀವು ಮಾತ್ರ ಎಲ್ಲೋ ಒಂದು ಕಡೆ ತೂಕಡಿಸುತ್ತಾ ಕೂತಿದ್ದಿರಿ. ನೀವು ತೂಕಡಿಸೋದನ್ನ ನಾನು ಟಿವಿಯಲ್ಲಿ ನೋಡಿದ್ದೆ. ನಿಮ್ಮ ಸ್ಥಿತಿ ಎಲ್ಲಿಗೆ ಬಂತು ಸಿದ್ದರಾಮಯ್ಯ ಎಂದು ವ್ಯಂಗ್ಯವಾಡಿದರು.