ಮಂಗಳೂರು: ಸದಾ ನಾಟಿ ಕೋಳಿ, ಮಟನ್ ಸಾರನ್ನೇ ನೆಚ್ಚಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಈಗ ಪಥ್ಯಾಹಾರದಲ್ಲಿ ತೊಡಗಿದ್ದಾರೆ.
10 ದಿನಗಳ ಪ್ರಕೃತಿ ಚಿಕಿತ್ಸೆಗಾಗಿ ಧರ್ಮಸ್ಥಳದ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಾಗಿರುವ ಸಿದ್ದರಾಮಯ್ಯ ಅಲ್ಲಿ ಎರಡು ದಿನಗಳನ್ನು ಕಳೆದಿದ್ದಾರೆ. ಸದಾ ತಿರುಗಾಟದಿಂದ ಶುಗರ್, ಬಿಪಿ ಹೆಚ್ಚಿಸಿಕೊಂಡಿದ್ದ 69ರ ಹರೆಯದ ಸಿದ್ದುಗೆ ಈಗ ಮಾಂಸಾಹಾರ ಸಂಪೂರ್ಣ ವರ್ಜ್ಯ.
ಬೆಳಗ್ಗೆ 6 ಗಂಟೆಗೆ ಎದ್ದು ಯೋಗ, ಪ್ರಾಣಾಯಾಮ, 9 ಗಂಟೆಗೆ ರಾಗಿ ಗಂಜಿ. 11 ಗಂಟೆಗೆ ಹಸಿ ತರಕಾರಿಯೇ ಮಧ್ಯಾಹ್ನದ ಊಟ. ಹಸಿ ತರಕಾರಿ, ಮೊಳಕೆ ಕಾಳು, ಸಲಾಡ್ ಮತ್ತು ಮಜ್ಜಿಗೆ ಮಾತ್ರ. ಉಪ್ಪು, ಹುಳಿ, ಖಾರ ಇಲ್ಲ. ಅನ್ನವೂ ಇಲ್ಲದ ಊಟ. ಸಂಜೆ 6.30ಕ್ಕೆ ರಾತ್ರಿ ಊಟ. ಬೇಯಿಸಿದ ತರಕಾರಿ, ಎರಡು ಚಪಾತಿ, ಮಜ್ಜಿಗೆ, ಪಪ್ಪಾಯಿ ಅಷ್ಟೇ.
ಇದರ ನಡುವೆ, ವಿಶ್ರಾಂತಿ, ಜಲ ಚಿಕಿತ್ಸೆ, ಹೈಡ್ರೋಥೆರಪಿ, ಮಸಾಜ್ ಇರುತ್ತದೆ. ಯಾರನ್ನೂ ಭೇಟಿಯಾಗಲಿಕ್ಕಿಲ್ಲ. ರಾತ್ರಿ ಹತ್ತು ಗಂಟೆಗೆ ನಿದ್ದೆ. ಸದಾ ಗಿಜಿಗುಡುತ್ತಿದ್ದ ಬೆಂಬಲಿಗರ ನಡುವಿದ್ದ ಸಿದ್ದರಾಮಯ್ಯ, ಸಂಪೂರ್ಣ ಬದಲಾಗಿದ್ದಾರೆ. ಕಳೆದ ವರ್ಷ ಮೀನು ತಿಂದು ಧರ್ಮಸ್ಥಳ ದೇವಸ್ಥಾನಕ್ಕೆ ಹೋದರೆಂಬ ಅಪವಾದ ಹೊತ್ತುಕೊಂಡಿದ್ದ ಸಿದ್ದು ಈಗ ಅದೇ ಧರ್ಮಸ್ಥಳ ಬಳಿಯ ಚಿಕಿತ್ಸಾಲಯದಲ್ಲಿ ದೇಹ ದಂಡನೆ ಮಾಡಿಕೊಳ್ತಿರೋದು ಕಾಕತಾಳೀಯ.