DistrictsKarnatakaKolarLatestLeading NewsMain Post

ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸೋದು ಪಕ್ಕಾ – ಕಾಂಗ್ರೆಸ್ ಶಾಸಕರ ವಿಶ್ವಾಸ

ಕೋಲಾರ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Assembly Election) ಸಮಯ ಹತ್ತಿರವಾಗುತ್ತಿದ್ದಂತೆ ರಾಜ್ಯದ ಆ ಒಬ್ಬ ಪ್ರಭಾವಿ ಮುಖಂಡ ಈ ಬಾರಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋ ಕುತೂಹಲ ಮೂರು ಪಕ್ಷದವರನ್ನು ಕಾಡುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯ ಉತ್ತರ ಸಿಕ್ಕಿದ್ದು, ಆ ನಾಯಕ ಸ್ಪರ್ಧಿಸುವ ಕ್ಷೇತ್ರ ಬಹುತೇಕ ಫೈನಲ್ ಆಗಿದೆ. ಯಾರು ಆ ನಾಯಕ, ಯಾವುದು ಆಕ್ಷೇತ್ರ?

ರಾಜ್ಯದ ಪ್ರಭಾವಿ ನಾಯಕರಲ್ಲಿ ಮಾಜಿ ಸಿಎಂ (ChiefMinister) ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕೂಡಾ ಒಬ್ಬರು, ಇನ್ನೇನು ಮುಂದಿನ ವಿಧಾನಸಭೆ ಚುನಾವಣೆಗೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಅನ್ನೋ ಹಲವು ಪ್ರಶ್ನೆಗಳು ರಾಜ್ಯದ ಪ್ರಮುಖ ಮೂರು ಪಕ್ಷಗಳ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಕಾಡುತ್ತಲೇ ಇತ್ತು. ಕಳೆದ ಬಾರಿ ಬಾದಾಮಿ ಕ್ಷೇತ್ರದಿಂದ ಪ್ರಯಾಸದ ಗೆಲುವು ಸಾಧಿಸಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರ (chamundeshwari Constituency), ಹುಣಸೂರು, ಚಾಮರಾಜಪೇಟೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಕೋಲಾರ (Kolara) ವಿಧಾನಸಭಾ ಕ್ಷೇತ್ರದಿಂದ ಸಿದ್ದು ಸ್ಪರ್ಧೆ ಮಾಡೋದು ಖಚಿತ ಎಂದು ಸಿದ್ದು ಆಪ್ತ ವಲಯದಿಂದ ಕೇಳಿಬಂದಿದೆ. ಅದಕ್ಕೆ ಪೂರಕ ಎಂಬಂತೆ ಈಗಾಗಲೇ ಕೋಲಾರ ಜಿಲ್ಲೆಯ ಶಾಸಕರು ಸಿದ್ದರಾಮಯ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ವಿವಿಧ ಸಮುದಾಯಗಳ ಜನರು ಸಿದ್ದರಾಮಯ್ಯರನ್ನ ಭೇಟಿ ಮಾಡಿ ಕೋಲಾರದಿಂದ ಸ್ಪರ್ಧಿಸಲು ಆಹ್ವಾನ ನೀಡಿದ್ದಾರೆ. ಈ ನಡುವೆ ಸಿದ್ದರಾಮಯ್ಯ (Siddaramaiah) ಕೂಡಾ ಬಹುತೇಕ ಸಮ್ಮತಿ ಸೂಚಿಸಿದ್ದಾರೆ ಅನ್ನೋದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ಮಾತು.

ಅಷ್ಟೇ ಅಲ್ಲದೆ ಕೋಲಾರ ಕ್ಷೇತ್ರ ಸಿದ್ದರಾಮಯ್ಯನವರ ಗೆಲುವಿಗೆ ಹೇಳಿ ಮಾಡಿಸಿದ ಕ್ಷೇತ್ರ. ಯಾಕಂದ್ರೆ ಹೆಚ್ಚಾಗಿ ಕುರುಬ ಸಮುದಾಯ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮತಗಳಿರುವ ಕ್ಷೇತ್ರ. ಜೊತೆಗೆ ಸಿದ್ದು ಸಿಎಂ ಆಗಿದ್ದ ಅವಧಿಯಲ್ಲಿ ಕೆಸಿ ವ್ಯಾಲಿ ಯೋಜನೆಯನ್ನು ಕೊಡುಗೆಯಾಗಿ ನೀಡುವ ಮೂಲಕ ಕೋಲಾರ ಜನರ ಮನಸ್ಸು ಗೆದ್ದಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಅವರನ್ನು ವಿರೋಧಿಸುವ ಜನರೇ ಇಲ್ಲ ಅನ್ನೋದು ನಂಜೇಗೌಡರ ಮಾತು. ಅಲ್ಲದೇ ಈಗಾಗಲೇ ಸಿದ್ದರಾಮಯ್ಯ ಕೂಡಾ ಒಪ್ಪಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ ಎನ್ನಲಾಗುತ್ತಿದೆ.

ಈ ಹಿಂದೆ ಸಿದ್ದರಾಮಯ್ಯನವರು ತಮ್ಮ ಬೆಂಬಲಿಗರೊಬ್ಬರ ಮನೆ ಗೃಹಪ್ರವೇಶ ಕಾರ್ಯಕ್ರಮಕ್ಕೆಂದು ಬಂದಾಗಲೂ ಕೂಡಾ ಕೋಲಾರದಿಂದ ಸ್ಪರ್ಧೆ ಮಾಡುವಂತೆ ಭೇಟಿ ಮಾಡಿ ಒತ್ತಾಯಿಸಲಾಗಿತ್ತು. ಆದರೆ ಸಿದ್ದರಾಮಯ್ಯ ಅವರು ನಾನಿನ್ನೂ ಯಾವುದೇ ತೀರ್ಮಾನ ಮಾಡಿಲ್ಲ ಎಂದಿದ್ದರು. ಈ ನಡುವೆ ಸಿಎಂ ಆಗಿದ್ದ ವೇಳೆಯಲ್ಲಿ ಕೋಲಾರ ಜಿಲ್ಲೆಗೆ ಕೊಟ್ಟ ಮೊದಲ ನೀರಾವರಿ ಯೋಜನೆ ಕೆ.ಸಿ.ವ್ಯಾಲಿ ಯೋಜನೆಯನ್ನು ಕೊಟ್ಟಿದ್ದು ಸಿದ್ದರಾಮಯ್ಯ. ಹಾಗಾಗಿ ಸಿದ್ದು ಅವರಿಗೂ ಕೋಲಾರಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧ ಇದೆ.

ಸಿದ್ದರಾಮಯ್ಯ ಅವರಿಗೆ ಕೋಲಾರದ ಮೇಲೆ ವಿಶೇಷ ಕಾಳಜಿ ಇದೆ. ಅವರಿಂದ ಜಿಲ್ಲೆಯಲ್ಲಿ ನೀರಾವರಿ ಕ್ರಾಂತಿಯಾಗಿದೆ. ಇದರ ಜೊತೆಗೆ ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದೇ ಆದಲ್ಲಿ ಅವರಿಗಿಂತ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಮಗೆ ಹೆಚ್ಚು ಅನುಕೂಲ ಅನ್ನೋದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತು. ಹಾಗಾಗಿ ರಮೇಶ್ ಕುಮಾರ್ ನೇತೃತ್ವದ ಶಾಸಕರ ತಂಡ ಅವರ ಮೇಲೆ ಒತ್ತಡ ಹಾಕುತ್ತಿದ್ದೇವೆ ಎನ್ನುತ್ತಿದ್ದಾರೆ.

ಸದ್ಯ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನೊಂದು ಬಾರಿ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಸಿದ್ದರಾಮಯ್ಯ ವಿರೋಧಿಗಳ ಸಂಖ್ಯೆ ಕೂಡಾ ಹೆಚ್ಚಾಗಿದ್ದು, ಗೆಲುವು ಅಷ್ಟು ಸುಲಭದ ಮಾತಲ್ಲ. ಹಾಗಾಗಿ ಅಳೆದು ತೂಗಿ ಕೋಲಾರ ಸೇಫ್ ಅಂದುಕೊಂಡಿರುವ ಸಿದ್ದರಾಮಯ್ಯ ಅಂತಿಮವಾಗಿ ಘೋಷಣೆ ಮಾಡೋದೊಂದೇ ಬಾಕಿ ಇದೆ.

Live Tv

Leave a Reply

Your email address will not be published. Required fields are marked *

Back to top button