ಉಡುಪಿ: ರೈತರ ಬಗ್ಗೆ ಮಾತನಾಡೋ ನೈತಿಕತೆ ಕುಮಾರಸ್ವಾಮಿಗೆ ಇಲ್ಲ ಎಂದಿರುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಉಡುಪಿಯಲ್ಲಿ ಎಚ್‍ಡಿಕೆ ತಿರುಗೇಟು ನೀಡಿದ್ದಾರೆ. ಸಿಎಂ ಅವರನ್ನು ಓತ್ಲಾ ರೈತ ಅಂತ ಲೇವಡಿ ಮಾಡಿದ್ದಾರೆ. ಸಾಲ ಮನ್ನಾದ ಕಥೆ ಒಂದು ತಿಂಗಳೊಳಗೆ ಬಯಲಾಗಲಿದೆ ಎಂದಿದ್ದಾರೆ.
ಉಡುಪಿ ಶ್ರೀಕೃಷ್ಣಮಠಕ್ಕೆ ಭಾನುವಾರ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗೂ ಕುಟುಂಬ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ಪರ್ಯಾಯ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿದ ಕುಮಾರಸ್ವಾಮಿ ಸ್ವಾಮೀಜಿಯನ್ನು ಗೌರವಿಸಿದರು. ಇದೇ ಸಂದರ್ಭ ಕೃಷ್ಣಮಠದ ಕಡೆಯಿಂದ ಎಚ್‍ಡಿಕೆ ಕುಟುಂಬವನ್ನು ಗೌರವಿಸಲಾಯ್ತು. ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಎಚ್‍ಡಿಕೆ ಸಿದ್ದರಾಮಯ್ಯ ಓತ್ಲಾ ರೈತ ಅಂತ ಜರಿದರು.
Advertisement
ನಾವು ನಿಜವಾದ ರೈತರು, ರೈತರ ಮಕ್ಕಳು. ರಾಜಕೀಯಕ್ಕೆ ಬರುವವರೆಗೂ ಬೇಸಾಯ ಮಾಡುತ್ತಿದ್ದೆವು. ತಿಪ್ಪೆ ಗುಂಡಿಯಿಂದ ಗೊಬ್ಬರ ಎತ್ತಿದ್ದೇನೆ. 50 ಸಾವಿರ ರೂಪಾಯಿ ಸಾಲ ಮನ್ನಾದ ಕಥೆ ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತೆ ಎಂದರು.
Advertisement
ರಾಷ್ಟ್ರಪತಿಗಳು ಕೃಷ್ಣಮಠಕ್ಕೆ ಬಂದಾಗ ಸಿಎಂ ಬರಬೇಕಿತ್ತು. ಸಿಎಂ ಬಾರದಿರುವುದರಿಂದ ಕೃಷ್ಣಮಠಕ್ಕೆ, ಸ್ವಾಮೀಜಿಗಳಿಗೆ ನಷ್ಟವಿಲ್ಲ. ನಷ್ಟ ಆಗಿರೋದು ಸಿಎಂ ಸಿದ್ದರಾಮಯ್ಯಗೆ. ಅವರ ಇಂತಹ ಉದ್ಧಟತನದಿಂದಲೇ ರಾಜ್ಯ ಈ ಪರಿಸ್ಥಿತಿಯಲ್ಲಿದೆ. ಈ ಬಾರಿಯೂ ಮಳೆಯಾಗದಿರುವುದಕ್ಕೂ ಇದೇ ಕಾರಣ ಎಂದು ಸಿಎಂರನ್ನು ಕೆಣಕಿದರು.
Advertisement
ಗುಲಾಂ ನಬಿ ಆಜಾದ್ ಫೋನ್ ಮಾಡಿದ್ದರು. ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್‍ಗೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದು, ಮೀರಾರನ್ನು ಬೆಂಬಲಿಸುವುದಾಗಿ ಹೇಳಿದರು. ಕುಮಾರಸ್ವಾಮಿ ಕರಾವಳಿ ದೇಗುಲಗಳ ದರ್ಶನ ನಡೆಸುತ್ತಿದ್ದು ಪತ್ನಿ ಅನಿತಾಕುಮಾರಸ್ವಾಮಿ, ಪುತ್ರ ನಿಖಿಲ್ ಜೊತೆಗಿದ್ದರು.