ಬಾಗಲಕೋಟೆ: ಇಂದಿನಿಂದ ಎರಡು ದಿನಗಳ ಕಾಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಯುರೋಪ್ ಪ್ರವಾಸದ ನಂತರ ಮತ್ತೆ ಬಾದಾಮಿ ಕ್ಷೇತ್ರದ ಕಡೆ ಮುಖ ಮಾಡಿದ್ದು, ಅವರಿಗಾಗಿ 20 ಲಕ್ಷ ರೂ. ಖರ್ಚು ಮಾಡಿ ಗೃಹ ಕಚೇರಿಯನ್ನು ಸಿದ್ಧ ಪಡಿಸಲಾಗಿದೆ.
ಬಾದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಮನೆ ಸಿಗಲಿಲ್ಲ. ಹೀಗಾಗಿ ಲೋಕೋಪಯೋಗಿ ಸಹಾಯಕ ಎಂಜಿನಿಯರ್ ಮನೆಯನ್ನೇ ತಮ್ಮ ಗೃಹಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಮನೆಗೆ ಈಗ ನವೀಕರಣ ಭಾಗ್ಯ ಸಿಕ್ಕಿದ್ದು, ಕಚೇರಿ ಸಿದ್ದರಾಮಯ್ಯ ಗೃಹ ಕಚೇರಿಯಾಗಿ ಲಕಲಕ ಹೊಳೆಯುತ್ತಿದೆ.
Advertisement
Advertisement
ಐಶಾರಾಮಿ ಕಚೇರಿಗೆ ಇಂದು ಉದ್ಘಾಟನೆ ಭಾಗ್ಯ ದೊರೆತಿದ್ದು, ಎಸಿ, ಸೋಫಾ ಸೆಟ್, ವಿಶ್ರಾಂತಿ ಗೃಹ, ಟಿವಿ, ಕಬೋರ್ಡ್ ಮತ್ತು ಮೀಟಿಂಗ್ ಹಾಲ್ ಎಲ್ಲವೂ ಹೈಟೆಕ್ ಆಗಿದೆ. ಸಿದ್ದರಾಮಯ್ಯನವರು ಈ ಹಿಂದೆ ಬಾದಾಮಿಯಲ್ಲಿ ಮನೆ ಮಾಡುತ್ತೇನೆ ಅಂತ ಹೇಳಿದ್ದರು. ಆದರೆ ಬಾದಾಮಿಯಲ್ಲಿ ಒಳ್ಳೆ ಮನೆ ಸಿಗಲಿಲ್ಲ. ಸದ್ಯ ಕಚೇರಿ ಆರಂಭಿಸುತ್ತೇನೆ ಅಂತ ಎರಡು ತಿಂಗಳ ಹಿಂದೆ ಸಿದ್ದರಾಮಯ್ಯ ಜನರೆದುರು ಹೇಳಿಕೊಂಡಿದ್ದರು. ಇದೀಗ ಮನೆ ಬದಲು ಗೃಹಕಚೇರಿ ಆರಂಭವಾಗುತ್ತಿದೆ.
Advertisement
ಗೃಹಕಚೇರಿ ಉದ್ಘಾಟನೆ ನಂತರ ಬಾದಾಮಿಯ ಅಕ್ಕಮಹಾದೇವಿ ಕಲ್ಯಾಣಮಂಟಪದಲ್ಲಿ ಪುರಸಭಾ ಸದಸ್ಯರ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಳಿಕ ಸಂಜೆ ಜಮಖಂಡಿ ನಗರದ ಜಮಖಂಡಿ ನಗರದ ಬಸವಭವನದಲ್ಲಿ ಕೈ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಸಭೆ ನಂತರ ರಾತ್ರಿ ಬಾದಾಮಿ ಪಟ್ಟಣದಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಮಾಡಲಿದ್ದಾರೆ.
Advertisement
ಶುಕ್ರವಾರ ಸಿದ್ದರಾಮಯ್ಯ ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣಕ್ಕೆ ಭೇಟಿ ನೀಡಿ ಕೆರೂರು ಪಟ್ಟಣ ಪಂಚಾಯತ್ ಸದಸ್ಯರ ಅಭಿನಂದನಾ ಕಾರ್ಯಕ್ರಮ ನಡೆಸಲಿದ್ದಾರೆ. ಬಳಿಕ ರಾಚೋಟೇಶ್ವರ ಕಲ್ಯಾಣಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಕೆರೂರು ಭಾಗದ ಜನರಿಂದ ಅಹವಾಲು ಸ್ವೀಕರಿಸಲಿದ್ದಾರೆ. ನಂತರ ಮಧ್ಯಾಹ್ನ ಕೆರೂರು ಪಟ್ಟಣದಿಂದ ಗದಗ ಜಿಲ್ಲೆಗೆ ತೆರಳಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv