ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಚರ್ಚೆಯ ವೇಳೆ ಶಾಸಕ ಸಿ.ಟಿ ರವಿ ಮತ್ತು ಸಿಎಂ ಸಿದ್ದರಾಮಯ್ಯ ಅವರ ನಡುವೆ ಶಾಸಕರ ಪಕ್ಷಾಂತರ ವಿಚಾರದ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಸಿದ್ದರಾಮಯ್ಯನವರು ಕಾಂಗ್ರೆಸ್ ಸೇರಿದ ಕಥೆಯನ್ನು ಬಿಚ್ಚಿಟ್ಟರು.
2006ರಲ್ಲಿ ಸಿದ್ದರಾಮಯ್ಯನವರು ಜನತಾ ದಳದ ಉಪಮುಖ್ಯಮಂತ್ರಿಯಾಗಿದ್ದರು. ಅವರನ್ನು ಏನು ಕೊಟ್ಟು ಕರೆದುಕೊಂಡು ಹೋಗಿದ್ದೀರಿ ಎಂದು ನಾವು ಕೇಳಿಲ್ಲ ಎಂದು ಸಿಟಿ ರವಿ ಕಾಂಗ್ರೆಸ್ ನಾಯಕರ ಆಪರೇಷನ್ ಕಮಲದ ಆರೋಪಕ್ಕೆ ತಿರುಗೇಟು ನೀಡಿದರು.
Advertisement
Advertisement
ಈ ವೇಳೆ ಎದ್ದುನಿಂತ ಸಿದ್ದರಾಮಯ್ಯ, ರವಿಗೆ ಸರಿಯಾದ ಮಾಹಿತಿ ಇಲ್ಲ ಅನಿಸುತ್ತದೆ. ನಾನು ಜೆಡಿಎಸ್ ಬಿಟ್ಟಿರಲಿಲ್ಲ. ಆದರೆ ಜೆಡಿಎಸ್ ನಿಂದ ನನ್ನನ್ನು ಹೊರಹಾಕಿದ್ರು. ಧರಂಸಿಂಗ್ ಅವರು ಉಪಮುಖ್ಯಮಂತ್ರಿ ಸ್ಥಾನದಿಂದ ನನ್ನನ್ನು ವಜಾಗೊಳಿಸಿದರು ಅರ್ಥವಾಯ್ತಾ? ನಿಜ ಏನೆಂದು ತಿಳಿಯದೇ ಏನೇನೋ ಮತಾಡಲು ಹೋಗಬೇಡಿ. ಇಲ್ಲಿ ತಪ್ಪು, ತಪ್ಪಾಗಿ ರೆಕಾರ್ಡ್ ಆಗಬಾರದು ಎಂದು ಹೇಳಿದರು.
Advertisement
Advertisement
ನೀವು ಆ ಸಂದರ್ಭದಲ್ಲಿ ದೇವೇಗೌಡರನ್ನು ಉದ್ದೇಶಿಸಿ ಮಾತನಾಡಿದ್ದನ್ನು, ಎಸ್ ಆರ್ ಬೊಮ್ಮಾಯಿ ಅವರನ್ನು ಯಾರು ಬಿಡಿಸಿದ್ದು, 20 ಜನರತ್ರ ಯಾರು ಸೈನ್ ಹಾಕಿಸಿದ್ದು ಎಂಬ ವಿಡಿಯೋ ನಿನ್ನೆ ಮೊನ್ನೆ ಬಂದಿತ್ತು ಎಂದು ರವಿ ತಿರುಗೇಟು ನೀಡಿದರು.
ಆಗ ಸಿದ್ದರಾಮಯ್ಯ ಅವರು, ರವಿ, ಯಾವ್ಯಾವ ಕಡೆಗೆ ಹೋಗಬೇಡಪ್ಪಾ ನೀನು.. ಎಂದು ಹೇಳಿ, ನಾನು ಉಪಮುಖ್ಯಮಂತ್ರಿಯಾಗಿದ್ದಿದ್ದು ನಿಜ. ಆಗ ನನ್ನನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ವಜಾ ಮಾಡಿದ್ರು. ಕೂಡಲೇ ನಾನು ಹೋಗಿ ಕಾಂಗ್ರೆಸ್ ಪಕ್ಷ ಸೇರಿಲ್ಲ. ಬದಲಾಗಿ ಅಹಿಂದ ಸಂಘಟನೆ ಮಾಡುತ್ತಿದ್ದೆ. 2005ರಲ್ಲಿ ಪ್ರಾರಂಭಿಸಿ ಸುಮಾರು 1 ವರ್ಷದ ಸಂಘಟನೆ ಮಾಡಿದ ಬಳಿಕ 2006ರಲ್ಲಿ ಕಾಂಗ್ರೆಸ್ ಸೇರಿದೆ. 2005ರ ಮೇ ತಿಂಗಳಲ್ಲಿ ನನ್ನನ್ನು ವಜಾಗೊಳಿಸಲಾಗಿತ್ತು. ಈವಾಗ ನೀವು ಈ ಮುಸುಕಿನ ಗುದ್ದಾಟ ಮಾಡುತ್ತಿದ್ದೀರಲ್ವಾ? ಆ ರೀತಿ ಅಂದು ಆಗಿರಲಿಲ್ಲ. ಇದನ್ನು ನೀವು ಅರ್ಥಮಾಡಿಕೊಳ್ಳಬೇಕು ಎಂದರು.
ನೀವು ಕೂಡ ಅಧಿಕಾರಕ್ಕೆ ಬನ್ನಿ. ನಾವೇನು ಬೇಡ ಅಂದಿಲ್ಲ. ಪ್ರಜಾಪ್ರಭುತ್ವದಲ್ಲಿ ಜನ ಯಾರಿಗೆ ಆಶೀರ್ವಾದ ಮಾಡುತ್ತಾರೋ ಅವರು ಅಧಿಕಾರಕ್ಕೆ ಬರಲೇ ಬೇಕು. 5 ವರ್ಷ ಅಧಿಕಾರ ಮಾಡಲೇ ಬೇಕು. ಅದರ ಬಗ್ಗೆ ನಂದೇನು ತಕರಾರಿಲ್ಲ. ಆದರೆ ಹಿಂಬಾಗಿಲಿಂದ ಅಧಿಕಾರದಲ್ಲಿದ್ದ ಪಕ್ಷದ ಶಾಸಕರನ್ನು ಓಲೈಸಿ, ಆಸೆ, ಆಮಿಷ, ಹಣ, ಅಧಿಕಾರ ತೋರಿಸಿ ಅವರನ್ನು ಕರೆದುಕೊಂಡು ಹೋಗಿ ಮುಂಬೈನಲ್ಲಿಟ್ಟಿರುವುದು ವೆರಿ ಬ್ಯಾಡ್ ಎಂದು ತಿರುಗೇಟು ನೀಡಿದರು.