ಬೆಂಗಳೂರು: ಕೂಡಲೇ ನೀವು ದೆಹಲಿಗೆ ಬನ್ನಿ ಎಂದು ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಲಾವ್ ನೀಡಿದೆ.
ಹೈಕಮಾಂಡ್ ಆದೇಶದಿಂದ ತಕ್ಷಣವೇ ಸಿದ್ದರಾಮಯ್ಯ ಅವರು ಮಧ್ಯಾಹ್ನ ದೆಹಲಿಗೆ ತೆರಳಲಿದ್ದಾರೆ. ಇಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಜೊತೆಗಿನ ಕಾಂಗ್ರೆಸ್ ಮುಖಂಡರ ರಾಜಿ ಸಂಧಾನ ಸಭೆ ಇತ್ತು. ಆದರೆ ದೆಹಲಿಗೆ ಹೋಗಬೇಕಾದ ಹಿನ್ನೆಲೆಯಲ್ಲಿ ಸಭೆಯನ್ನು ಶನಿವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.
ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್ ಸಿಇಸಿ ಸಭೆ ಇತ್ತು. ಆದರೆ ನಾಳೆ ದೆಹಲಿಗೆ ಹೋಗಬೇಕಿದ್ದ ಸಿದ್ದರಾಮಯ್ಯ ಇಂದೇ ತುರ್ತಾಗಿ ಇಲ್ಲಿನ ಸಭೆ ರದ್ದು ಮಾಡಿ ಹೊರಡುತ್ತಿದ್ದಾರೆ. ಶುಕ್ರವಾರ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸಲಿದ್ದು, ಅದರಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಹಾಸನ ಮುಖಂಡರಿಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಇಂದು ಸಂಜೆ ದೆಹಲಿಯಲ್ಲಿ ರಾಜ್ಯದ ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಪರಮೇಶ್ವರ್, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ನಾಮಪತ್ರ ಸಲ್ಲಿಕೆ ವೇಳೆ ನಾವೆಲ್ಲಾ ಭಾಗಿಯಾಗುತ್ತೇವೆ. ಸಿದ್ದರಾಮಯ್ಯನವರು ಕೂಡ ನಮಗೆ ಸೂಚನೆ ನೀಡಿದ್ದಾರೆ. ಇವತ್ತು ಹಾಸನ ಮುಖಂಡರು ಹಾಗೂ ಹೆಚ್.ಡಿ. ರೇವಣ್ಣ ಜೊತೆ ಸಿದ್ದರಾಮಯ್ಯನವರು ಸಭೆ ಮಾಡಬೇಕಿತ್ತು. ಆದರೆ ಅವರು ದಿಢೀರ್ ದೆಹಲಿಗೆ ಹೊರಟ ಕಾರಣ ಸಭೆಯನ್ನು ಶನಿವಾರಕ್ಕೆ ಮುಂದೂಡಿಕೆಯಾಗಿದೆ ಎಂದು ಶಾಸಕ ಗೋಪಾಲಸ್ವಾಮಿ ತಿಳಿಸಿದ್ದಾರೆ.
ದಿಢೀರ್ ದೆಹಲಿಗೆ ಯಾಕೆ?
ಮಂಡ್ಯದಲ್ಲಿ ಬುಧವಾರ ಸುಮಲತಾ ಅಂಬರೀಶ್ ಅವರು ನಾಮಪತ್ರ ಸಲ್ಲಿಸುವ ವೇಳೆ ಹಲವು ಅತೃಪ್ತ ಕಾಂಗ್ರೆಸ್ ನಾಯಕರು ಅವರಿಗೆ ಬೆಂಬಲ ಸೂಚಿಸಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಜೊತೆ ಅಸಮಾಧಾನವನ್ನು ಹೇಳಿಕೊಂಡಿದ್ದರು. ಕೈ ನಾಯಕರು ಬೆಂಬಲ ನೀಡಿದ ವಿಚಾರ ತಿಳಿಯುತ್ತಿದ್ದಂತೆ ಬುಧವಾರ ಸಂಜೆ ದಿಢೀರ್ ಆಗಿ ಡಿಕೆ ಶಿವಕುಮಾರ್ ಅವರು ಮಂಡ್ಯದ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿದ್ದರು. ಮಂಡ್ಯದ ಕಾಂಗ್ರೆಸ್ ನಾಯಕರ ನಡೆಯ ಬಗ್ಗೆ ಕುಮಾರಸ್ವಾಮಿ ಹೈಕಮಾಂಡ್ ನವರಿಗೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಚುನಾವಣೆಯ ಸಂದರ್ಭದಲ್ಲಿ ದೋಸ್ತಿ ನಿರ್ಧಾರಕ್ಕೆ ಯಾವುದೇ ಸಮಸ್ಯೆ ಆಗದೇ ಇರಲು ನಿರ್ಧಾರ ಕೈಗೊಳ್ಳುವ ಸಂಬಂಧ ಹೈಕಮಾಂಡ್ ಸಿದ್ದರಾಮಯ್ಯನವರನ್ನು ದೆಹಲಿಗೆ ಬರುವಂತೆ ಸೂಚಿಸಿದೆ ಎನ್ನಲಾಗಿದೆ.