ಉಡುಪಿ: ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಅಧಿಕಾರ ಕಳೆದುಕೊಂಡ ನಂತರ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತವನ್ನೂ ಕಳೆದುಕೊಂಡಿದ್ದಾರೆ. ಕಾಂಗ್ರೆಸನ್ನು ಬ್ಲ್ಯಾಕ್‍ಮೇಲ್ ಮಾಡಿ ವಿಪಕ್ಷದ ನಾಯಕರಾಗಿದರು. ಕಾಂಗ್ರೆಸ್ ಪಕ್ಷದ ಮೇಲೆ ಸಿದ್ದರಾಮಯ್ಯಗೆ ಯಾವುದೇ ಹಿಡಿತ ಇಲ್ಲ. ಕಾಂಗ್ರೆಸ್ ಬಣಗಳಾಗಿ ಒಡೆದಿದೆ. ಸಿದ್ದರಾಮಯ್ಯ ಬಣ, ಪರಮೇಶ್ವರ್ ಬಣ, ಡಿಕೆಶಿದ್ದು ಹೀಗೆ ಬೇರೆ ಬೇರೆ ಬಣಗಳನ್ನು ನಿಭಾಯಿಸಲಾಗದೆ. ಬಾಯಿಗೆ ಬಂದದ್ದು ಮಾತಾನಾಡುತ್ತಾರೆ. ಬಿಜೆಪಿ ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೆ, ಏಕಾಂಗಿಯಾಗಿಯೇ ಉಪ ಚುನಾವಣೆಯನ್ನು ಗೆಲ್ಲುತ್ತೆ ಎಂದರು.
ರಾಜ್ಯದಲ್ಲಿ ಮೂರುವರೆ ವರ್ಷಗಳ ಕಾಲ ಬಿಜೆಪಿಯೇ ಆಡಳಿತ ಮಾಡುತ್ತೆ, ಜೆಡಿಎಸ್ ನವರು ಯಾರೂ ನಮ್ಮ ಸಂಪರ್ಕದಲ್ಲಿ ಇಲ್ಲ ಎಂದು ತಿಳಿಸಿದರು. ಅಲ್ಲದೆ ಸಿದ್ದರಾಮಯ್ಯ ಐದು ವರ್ಷದ ನಡವಳಿಕೆ ಜನ ನೋಡಿದ್ದಾರೆ. ಸಿದ್ದರಾಮಯ್ಯ ಕುತಂತ್ರ, ಷಡ್ಯಂತ್ರ ರಾಜ್ಯದ ಜನತೆಗೆ ಅರ್ಥವಾಗಿದೆ. ಈ ಬಾರಿ ಯಾರೂ ಸಿದ್ದರಾಮಯ್ಯ ಕುತಂತ್ರಕ್ಕೆ ಬಲಿಯಾಗಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಮಾಜಿ ಸಚಿವ ಡಿಕೆಶಿ ಕುರಿತಾದ ಪ್ರಶ್ನೆಗೆ ಕೆರಳಿದ ಶೋಭಾ, ಡಿಕೆ ಶಿವಕುಮಾರ್ ಪ್ರಭಾವ ಕನಕಪುರಕ್ಕೆ ಮಾತ್ರ ಸೀಮಿತ. ಡಿಕೆಶಿ ಬಿಡುಗಡೆಯಿಂದ ಉಪಚುನಾವಣೆ ಮೇಲೆ ಪ್ರಭಾವ ಇಲ್ಲ. ಡಿಕೆಶಿ ಇದ್ದಾಗಲೇ ವಿಧಾನಸಭಾ ಚುನಾವಣೆ ಆಗಿದೆ. ಆಗ ಡಿಕೆಶಿ ಮಂತ್ರಿಯಾಗಿದ್ದರೂ ವಿಧಾಸಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ. ಬಿಜೆಪಿ 104 ಸ್ಥಾನ ಗೆದ್ದಿದೆ. ಕನಕಪುರದಲ್ಲಿ ಡಿಕೆಶಿ ಪ್ರಭಾವ ಇರಬಹುದು, ಕನಕಪುರ ಗೆಲ್ಲೋದು ನಮಗೆ ಇವತ್ತಿಗೂ ಕಷ್ಟವೇ. ಆದರೆ ರಾಜ್ಯದಲ್ಲಿ ಡಿಕೆ ಪ್ರಭಾವವಿಲ್ಲ ಎಂದರು.