ಕೊಪ್ಪಳ: ಕಳೆದ 2019 ರ ಲೋಕಸಭೆ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಕೂಡಾ ಪ್ರಜ್ವಲ್ ರೇವಣ್ಣ (Prajwal Revanna) ಪರ ಪ್ರಚಾರ ಮಾಡಿದ್ದಾರೆ. ಅದರಂತೆ ಈ ಬಾರಿ ಎನ್‌ಡಿಎ ಒಕ್ಕೂಟದಿಂದ ರಾಜ್ಯದಲ್ಲಿ ಮೂರು ಸ್ಥಾನ ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದೇವೆ. ಪ್ರಜ್ವಲ್ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ (C.T.Ravi) ಸ್ಪಷ್ಟಪಡಿಸಿದರು.
ಕೊಪ್ಪಳದಲ್ಲಿ (Koppal) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಎಲ್ಲ ಘಟನೆ ಪ್ರಜ್ವಲ್ ಎನ್‌ಡಿಎ ಅಭ್ಯರ್ಥಿಯಾದ ನಂತರ ನಡೆದಿಲ್ಲ. ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬುದು ಜೆಡಿಎಸ್‌ಗೆ ಬಿಟ್ಟ ವಿಚಾರ ಆಗಿತ್ತು. ನಾವು ಪ್ರಕರಣವನ್ನು ಖಂಡಿಸಿದ್ದೇವೆ. ಒಂದೊಮ್ಮೆ ತಪ್ಪು ಮಾಡಿದ್ದರೆ, ಉಪ್ಪು ತಿಂದವನು ನೀರು ಕುಡಿಯಲೇಬೇಕು. ಇದು ಎಲ್ಲರಿಗೂ ಅನ್ವಯವಾಗುತ್ತದೆ. ಮಾತೃಶಕ್ತಿ ಜೊತೆ ಬಿಜೆಪಿ ನಿಲ್ಲುತ್ತದೆ. ಮಹಿಳೆಯರಿಗೆ ಆಗುವ ಯಾವುದೇ ಅನ್ಯಾಯವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಡ್ರೈವರ್ ಕಾರ್ತಿಕ್ ಮಲೇಷ್ಯಾದಲ್ಲಿದ್ದಾನೆ, ಆತನನ್ನು ಅಲ್ಲಿಗೆ ಕಳುಹಿಸಿದ್ದು ಯಾರು: ಹೆಚ್‌ಡಿಕೆ ಪ್ರಶ್ನೆ
Advertisement
Advertisement
ನಾವು ಪ್ರಜ್ವಲ್ ರೇವಣ್ಣ ಪರ ವಕಾಲತ್ತು ಮಾಡಲ್ಲ. ತಪ್ಪು ಮಾಡಿದ್ರೆ ಅವರಿಗೆ ಖಂಡಿತ ಶಿಕ್ಷೆಯಾಗಲಿ. ಆದರೆ ನೇಹಾ ಪ್ರಕರಣ ಮತ್ತು ಹಾಸನ ಘಟನೆಯನ್ನು ಒಂದೇ ತಕ್ಕಡಿಯಲ್ಲಿ ತೂಗಬಾರದು. ಹಾಸನ ಘಟನೆ ತನಿಖೆಯಾಗಬೇಕಿದೆ. ತನಿಖೆ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ. ನೇಹಾ ಘಟನೆ ಕಣ್ಣ ಮುಂದೆ ನಡೆದಿರೋದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ತನಿಖೆ ಮಾಡಿ ಕ್ರಮ ಕೈಗೊಳ್ಳಲಿ. ತನಿಖೆ ಮೇಲೆ ಯಾರು ಪ್ರಭಾವ ಬೀರುವ ಕೆಲಸ ಮಾಡಲ್ಲ. ಆದರೆ, ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ವರ್ತನೆ ಸರಿ ಇರಲಿಲ್ಲ. ಅದಕ್ಕಾಗಿ ನಾವು ಹೋರಾಟ ಮಾಡಬೇಕಾಯಿತು ಎಂದರು.
Advertisement
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಶಾಸಕ ರಾಜು ಕಾಗೆ ಹೇಳಿಕೆ ವಿಚಾರವಾಗಿ ಮಾತನಾಡಿ, ಮೋದಿ ಮೋದಿ ಎಂದು ಜನ ಹೇಳುವುದು ನೋಡಿಯೇ ಕಾಂಗ್ರೆಸ್‌ನವರಿಗೆ ಲೂಸ್ ಮೋಷನ್ ಆಗಿದೆ. ಹೀಗಾಗಿಯೇ ಅವರು ಚೊಂಬು ಹಿಡಿದುಕೊಂಡು ಓಡಾಡುತ್ತಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ಮಾಡದ ಹಗರಣಗಳಿಲ್ಲ. ಅಭಿವೃದ್ಧಿಯ ಜೊತೆಗೆ ಸುಭದ್ರ ಜೀವನ ಸಂಕಲ್ಪವೇ ಬಿಜೆಪಿ ಉದ್ದೇಶ. ಇನ್ನೆರಡು ವರ್ಷದಲ್ಲಿ ಜರ್ಮನ್ ಮತ್ತು ಜಪಾನ್ ಹಿಂದಿಕ್ಕುತ್ತೇವೆ. ಮುಂದಿನ 25 ವರ್ಷದ ನಂತರ ಭಾರತ ಜಗತ್ತಿನ ನಂಬರ್ 1 ರಾಷ್ಟ್ರ ಆಗುತ್ತೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಲ್ಲ ಗೊತ್ತಿದ್ದರೂ ಹೆಣ್ಣನ್ನು ಶೋಷಿಸುವ ರಾಕ್ಷಸನ ಪರ ಪ್ರಚಾರ ಮಾಡಿದ್ಯಾಕೆ: ಪ್ರಜ್ವಲ್ ಕೇಸ್‌ನಲ್ಲಿ ಮೋದಿ ವಿರುದ್ಧ ರಾಗಾ ಕಿಡಿ
Advertisement
ಮಾಜಿ ಸಂಸದ ಸಂಗಣ್ಣ ಕರಡಿ ಟೀಕೆಗೆ ಪ್ರತಿಕ್ರಿಯಿಸಿ, ಮೋದಿ ಮಾಯೆಯೇ ಸಂಗಣ್ಣ ಕರಡಿ ಅವರನ್ನು ಗೆಲ್ಲಿಸಿತ್ತು. ಕರಡಿ ಸಂಗಣ್ಣಗೆ ಸತ್ಯದ ದರ್ಶನ ಆಗುವುದಕ್ಕೆ ಹೆಚ್ಚು ಕಾಲ ಹಿಡಿಯಲ್ಲ. ಅದಕ್ಕೆ ನಾವು ಹಳೆ ಕ್ಯಾಸೆಟ್ ಹಾಕಿ ತೋರಿಸಬೇಕಿಲ್ಲ. ಕಾಂಗ್ರೆಸ್‌ನಲ್ಲಿ ವಿಶ್ವಾಸಾರ್ಹ ನಾಯಕತ್ವ ಇಲ್ಲ. ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದರೆ ಬರುವ ಮತಗಳೂ ಬರುವುದಿಲ್ಲ. ಮತ ಆಧಾರಿತ ಮೀಸಲಾತಿಯನ್ನು ಅಂಬೇಡ್ಕರ್ ವಿರೋಧಿಸಿದ್ದರು. ಜಾತಿ ಆಧಾರಿತ ಮೀಸಲಾತಿಗೆ ಈಗಲೂ ನಮ್ಮ ವಿರೋಧ ಇಲ್ಲ. ಈ ಬಗ್ಗೆ ಕಾಂಗ್ರೆಸ್ ಸಂವಿಧಾನ ಬಾಹಿರವಾಗಿ ವರ್ತಿಸುತ್ತಿದೆ. ರಾಜ್ಯ ಸರ್ಕಾರ ತಮ್ಮ ಖಜಾನೆಯಿಂದ ಬರ ಪರಿಹಾರಕ್ಕೆ ಎಷ್ಟು ಕೊಟ್ಟಿದೆ ಎಂಬುದನ್ನು ಹೇಳಲಿ ಎಂದರು.