Connect with us

Bengaluru City

ಯಾವ ರಾಜ್ಯದಲ್ಲಿ ಎಷ್ಟು ಸಾಲಮನ್ನಾ? ಕೇಂದ್ರ ಸರ್ಕಾರ ಮತ್ತು ಆರ್‍ಬಿಐ ಹೇಳಿದ್ದು ಏನು?

Published

on

ಬೆಂಗಳೂರು: ಕೊನೆಗೂ ರೈತರ ಮತ್ತು ವಿಪಕ್ಷಗಳ ಹೋರಾಟಕ್ಕೆ ಕರ್ನಾಟಕ ಸರ್ಕಾರ ಬಗ್ಗಿದ್ದು, ಸಹಕಾರಿ ಬ್ಯಾಂಕ್ ಗಳಲ್ಲಿನ ರೈತರ 50 ಸಾವಿರ ರೂ.ವರೆಗಿನ ಸಾಲವನ್ನು ಮನ್ನಾ ಮಾಡಿದೆ.

ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಕಟಿಸಿದ ಸಿಎಂ ಸಿದ್ದರಾಮಯ್ಯ, ಸಾಲಮನ್ನಾದಿಂದ ರಾಜ್ಯ ಸರ್ಕಾರಕ್ಕೆ 8,165 ಕೋಟಿ ರೂ. ಹೊರೆಯಾಗಲಿದ್ದು, 22,27,506 ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

4ನೇ ರಾಜ್ಯ: ಆರಂಭದಲ್ಲಿ ಉತ್ತರಪ್ರದೇಶದ ಯೋಗಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದರೆ, ಜೂನ್ ಎರಡನೇ ವಾರದಲ್ಲಿ ಮಹಾರಾಷ್ಟ್ರದಲ್ಲಿರುವ ಬಿಜೆಪಿ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿತ್ತು. ಇದಾದ ನಂತರ ಪಂಜಾಬ್‍ನಲ್ಲಿರುವ ಕಾಂಗ್ರೆಸ್ ಸರ್ಕಾರ ಸಾಲಮನ್ನಾ ನಿರ್ಣಯ ತೆಗೆದುಕೊಂಡ ಬಳಿಕ ಈಗ ಸಿದ್ದರಾಮಯ್ಯನವರು ಸಹಕಾರಿ ಬ್ಯಾಂಕ್ ಗಳಲ್ಲಿರುವ ಸಾಲವನ್ನು ಮನ್ನಾ ಮಾಡಲು ಮುಂದಾಗಿದ್ದಾರೆ.

ಉತ್ತರಪ್ರದೇಶ: ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಏಪ್ರಿಲ್ 4ರಂದು ನಡೆಸಿದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ರೈತರ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಪ್ರಕಟಿಸಿದ್ದರು. 2.25 ಕೋಟಿ ರೈತರಿಗೆ ಇದರಿಂದ ಅನುಕೂಲವಾಗಲಿದ್ದು, ಸರ್ಕಾರಕ್ಕೆ 36 ಸಾವಿರ ಕೋಟಿ ಹೊರೆಯಾಗಲಿದೆ.

ಮಹಾರಾಷ್ಟ್ರ: ಸಾಲಮನ್ನಾ ಮಾಡುವಂತೆ ರೈತರು ಪ್ರತಿಭಟನೆ ತೀವ್ರವಾದ ಬಳಿಕ ಸಿಎಂ ಫಡ್ನಾವಿಸ್ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಈ ಸಂಬಂಧ ಜೂನ್ 11 ರಂದು ಸಾಲಮನ್ನಾ ಮಾನದಂಡಕ್ಕೆ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ. ಕಡಿಮೆ ಭೂಮಿ ಹೊಂದಿರುವ ರೈತರ ಸಾಲವನ್ನು ಅಕ್ಟೋಬರ್ 31ರ ಒಳಗಡೆ ಮನ್ನಾ ಮಾಡುತ್ತೇವೆ ಅದರ ಜೊತೆ ವಿದ್ಯುತ್ ಬಿಲ್ ಬಾಕಿ ಇಟ್ಟುಕೊಂಡ ರೈತರ ದಂಡ ಹಾಗೂ ಬಡ್ಡಿಯನ್ನು ಪಾವತಿಸುತ್ತೇವೆ ಎಂದು ಫಡ್ನಾವಿಸ್ ಹೇಳಿದ್ದಾರೆ. ಈ ನಿರ್ಧಾರದಿಂದ ಸರ್ಕಾರಕ್ಕೆ 30 ಸಾವಿರ ಕೋಟಿ ಹೊರೆ ಬೀಳಲಿದೆ.

ಪಂಜಾಬ್: ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಜೂನ್ 20 ರಂದು 10 ಲಕ್ಷ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದೆ. 5 ಎಕರೆ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರ 2 ಲಕ್ಷ ರೂ.ವರೆಗಿನ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ. ಅಷ್ಟೇ ಅಲ್ಲದೇ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ಧನವನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಲಾಗುವುದು ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ. ಸಾಲಮನ್ನಾದಿಂದಾಗಿ ಪಂಜಾಬ್ ಸರ್ಕಾರಕ್ಕೆ 24 ಸಾವಿರ ಕೋಟಿ ಹೊರೆ ಬೀಳಲಿದೆ.

ಕೇಂದ್ರ ಸರ್ಕಾರ ಹೇಳಿದ್ದು ಏನು?
ಸಾಲಮನ್ನಾ ಮಾಡಬೇಕೋ? ಬೇಡವೋ ಎನ್ನುವುದು ರಾಜ್ಯ ಸರ್ಕಾರದ ತೀರ್ಮಾನಕ್ಕೆ ಬಿಟ್ಟ ವಿಚಾರ. ಕೇಂದ್ರ ಸರ್ಕಾರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೆ ಹಣಕಾಸಿನ ನೆರವು ನೀಡುವುದಿಲ್ಲ. ಈ ವಿಚಾರವನ್ನು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇವೆ, ಇದನ್ನು ಬಿಟ್ಟು ಹೊಸದಾಗಿ ಏನು ಹೇಳುವುದಿಲ್ಲ ಎಂದು ಜೂನ್ ಮೂರನೇ ವಾರದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದರು.

ಆರ್‍ಬಿಐ ಏನು ಹೇಳುತ್ತೆ?
ರೈತರ ಸಾಲಮನ್ನಾ ಮಾಡಿದರೆ ಹಣಕಾಸು ಸ್ಥಿತಿ ಬಿಗಡಾಯಿಸಬಹುದು. ದೇಶದ ಆರ್ಥಿಕ ಸ್ಥಿತಿ ಕೈ ತಪ್ಪಿ ಹೋಗಬಹುದು. ಈ ಯೋಜನೆಗಳನ್ನು ಪ್ರಕಟಿಸುವ ಮೊದಲು 100 ಬಾರಿ ಯೋಚಿಸಬೇಕು ಎಂದು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಆರ್‍ಬಿಐ ಗವರ್ನರ್ ಉರ್ಜಿತ್ ಪಟೇಲ್ ಈ ಹಿಂದೆ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ಸಾಲ ಮನ್ನಾ ಮಾಡಿದ ನಂತ್ರ ಮೋದಿಗೆ ಸಿಎಂ ಸವಾಲ್ ಹಾಕಿದ್ದು ಹೀಗೆ

Click to comment

Leave a Reply

Your email address will not be published. Required fields are marked *