ಬಿಬಿಎಂಪಿ ತ್ರಿಭಜನೆಗೆ ಸರ್ಕಾರದ ಭರ್ಜರಿ ತಯಾರಿ

Public TV
2 Min Read
BBMP 1

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಅವಧಿ ಸೆಪ್ಟೆಂಬರ್ 28 ಕ್ಕೆ ಅಂತ್ಯವಾಗಲಿದೆ. ಜಿ ಪದ್ಮಾವತಿ ಬಿಬಿಎಂಪಿಯ ಕೊನೆಯ ಮೇಯರ್ ಅಂತಾ ಹೇಳಲಾಗ್ತಿದೆ. ಯಾಕಂದ್ರೆ ಇನ್ಮುಂದೆ ಬಿಬಿಎಂಪಿ ಇರೋದಿಲ್ಲ. ಬದಲಿಗೆ ಬೆಂಗಳೂರಿಗೆ ಮೂರು ಕಾರ್ಪೊರೇಷನ್‍ಗಳು ಬರಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಹೌದು. ಬಿಬಿಎಂಪಿ ಅಂಗಳದ ಸದ್ಯದ ಬಿಸಿಬಿಸಿ ಚರ್ಚೆ ಅಂದ್ರೆ ಬಿಬಿಎಂಪಿ ಮೂರು ಭಾಗವಾಗುತ್ತೆ ಅನ್ನೋದು. ಎರಡು ವರ್ಷಗಳಿಂದ ಬಿಬಿಎಂಪಿಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡ್ಕೊಂಡು ಅಡಳಿತ ಮಾಡ್ತಿರೋ ಕಾಂಗ್ರೆಸ್, ಬಿಬಿಎಂಪಿ ತ್ರಿಭಜನೆಗೆ ಸ್ಕೆಚ್ ಹಾಕಿದೆ. ಅದಕ್ಕಾಗಿ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಬಿಬಿಎಂಪಿ ವಿಸರ್ಜಿಸದೆ ಈಗಿರುವ ಸದಸ್ಯರನ್ನೊಳಗೊಂಡಂತೆ ಮೂರು ಪಾಲಿಕೆ ರಚನೆ ಮಾಡಲಿದೆ.

BBMP 6

ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರೋ ಸರ್ಕಾರ ಈಗಾಗಲೇ 8 ವಲಯಗಳನ್ನು 10 ವಲಯಗಳನ್ನಾಗಿ ಮರುವಿಂಗಡಣೆ ಮಾಡಿ ಆದೇಶಿಸಿದೆ. ಇನ್ನು 198 ವಾರ್ಡ್‍ಗಳನ್ನು ಜನಸಂಖ್ಯೆ ಆಧಾರದಲ್ಲಿ ವಿಂಗಡಿಸಲು ಸರ್ಕಾರ ತಜ್ಞರ ಸಮಿತಿಗೆ ಸೂಚಿಸಿದೆ. ಜನಸಂಖ್ಯೆ ಅಧಾರದಲ್ಲಿ ವಾರ್ಡ್ ಗಳ ಪುನರ್ ರಚನೆ ಬಿ.ಎ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿದೆ. ಜೆಡಿಎಸ್ ಕೈಕೊಡೋ ಸಾಧ್ಯತೆಯಿದ್ದು, ಅಧಿಕಾರ ಉಳಿಸಿಕೊಳೋ ನಿಟ್ಟಿನಲ್ಲಿ ಈ ವಿಂಗಡನೆ ಕಾಂಗ್ರೆಸ್ ಗೆ ನೆರವಾಗಲಿದೆ.

ಬಿಬಿಎಂಪಿ ವಿಭಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕರ್ನಾಟಕ ಮುನ್ಸಿಪಲ್ ತಿದ್ದುಪಡಿ ಕಾಯ್ದೆಗೆ ಅನುಮತಿ ಕೋರಿ ರಾಷ್ಟ್ರಪತಿಗೆ ಕಳುಹಿಸಿದೆ. ಅದಕ್ಕೆ ಇನ್ನೂ ಅನುಮತಿ ದೊರೆತಿಲ್ಲ. ಹೀಗಿರುವಾಗಲೇ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ (ಕೆಎಂಸಿ)ಯಲ್ಲಿ ಅವಕಾಶವಿರುವಂತೆ ಬಿಬಿಎಂಪಿ ವಿಂಗಡಿಸಲು ಸರ್ಕಾರ ಮುಂದಾಗಿದೆ. ಆದ್ರೇ ಈ ಬಗ್ಗೆ ನಗರಾಭಿವೃದ್ಧಿ ಸಚಿವ ಜಾರ್ಜ್ ಅವರನ್ನ ಕೇಳಿದ್ರೆ ಅದೆಲ್ಲ ನಮ್ಮ ವ್ಯಾಪ್ತಿಗಿಲ್ಲ ಅಂತಾರೆ.

kj george

ಕೇಂದ್ರ ಸರ್ಕಾರ ತಿದ್ದುಪಡಿ ಕಾಯ್ದೆಯ ಬಗೆಗಿನ ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರದೊಂದಿಗೆ ನಡೆಸಲಾದ ಪತ್ರ ವ್ಯವಹಾರದಲ್ಲಿ ಬಿಬಿಎಂಪಿ ಸೂಪರ್‍ಸೀಡ್ ಮಾಡದಂತೆ ತಿಳಿಸಿದೆ. ಅದಕ್ಕೆ ಸರ್ಕಾರವೂ ಒಪ್ಪಿಗೆ ಸೂಚಿಸಿದ್ದು, ಬಿಬಿಎಂಪಿ ವಿಸರ್ಜಿಸದೆ ತ್ರಿಭಜನೆ ಮಾಡಲು ನಿರ್ಧರಿಸಿದೆ. ಬಿಬಿಎಂಪಿ ತ್ರಿಭಜನೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಬೆಂಗಳೂರು ವ್ಯಾಪ್ತಿಯ ಶಾಸಕರಿಗೆ ಮತ್ತು ಬಿಬಿಎಂಪಿ ಜನಪ್ರತಿನಿಧಿಗಳಿಗೂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ತ್ರಿಭಜನೆ ಯಾರಿಗೆ ವರವಾಗುತ್ತೋ, ಯಾರಿಗೆ ಮುಳ್ಳುವಾಗುತ್ತೋ ಕಾದು ನೋಡ್ಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *