ಬಾಗಲಕೋಟೆ: ಸಚಿವ ಕೆ.ಜೆ ಜಾರ್ಜ್ ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ದುಬಾರಿ ಕಾರು ಗಿಫ್ಟ್ ನೀಡಿರೋ ಸುದ್ದಿಯ ಬೆನ್ನಲ್ಲೇ ಇದೀಗ ಅಭಿಮಾನಿಯೊಬ್ಬರು ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ತಂಗಲು ಉಚಿತ ಮನೆ ಕೊಡಲು ಮುಂದಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ನೂತನ ಶಾಸಕ ಸಿದ್ದರಾಮಯ್ಯ ಮನೆ, ಕಚೇರಿ ಮಾಡೋದಾಗಿ ಈಗಾಗಲೇ ಹೇಳಿದ್ದರು. ಈ ಬೆನ್ನಲ್ಲೇ ಸಿದ್ದರಾಮಯ್ಯ ಅಭಿಮಾನಿ ಶಂಕರಗೌಡ ಕೆಳಗಿನಮನಿ ಎಂಬವರು ಉಚಿತ ಬಾಡಿಗೆ ಮನೆ ಆಫರ್ ಕೊಟ್ಟಿದ್ದಾರೆ.
ಬಾದಾಮಿಯ ಹೊಸಗೌಡರ ಕಾಲೋನಿಯ ಜಯನಗರದ ಮನೆ ಸುಸಜ್ಜಿತವಾದ 50*50 ಅಳತೆ ಡಬಲ್ ಬೆಡ್ ರೂಂ, ಡೈನಿಂಗ್ ಹಾಲ್, ಆಫೀಸ್ ರೂಂ, ಪೂಜಾ ರೂಂ, ಕಾರ್ ಪಾರ್ಕಿಂಗ್ ಸೇರಿದಂತೆ 186*150 ಅಳತೆಯ ವಿಶಾಲವಾದ ಹೊರಾಂಗಣ ಜಾಗವನ್ನು ಹೊಂದಿದೆ. ಇದನ್ನೂ ಓದಿ:1 ಕೋಟಿಯ ಕಾರು ಜೊತೆಗೆ 1 ವರ್ಷ ಡೀಸೆಲ್ ಭಾಗ್ಯ – ಮಾಜಿ ಸಿಎಂಗೆ ಜಾರ್ಜ್ ಭರ್ಜರಿ ಗಿಫ್ಟ್!
ಇನ್ನೂ ಶಂಕರಗೌಡ ಕೆಳಗಿನಮನಿ ಎಂಬವರ ಮನೆಯನ್ನು ಈಗಾಗಲೇ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಜೂನ್ 11ರಂದು ಬಾದಾಮಿಗೆ ಆಗಮಿಸಿದ್ದ ವೇಳೆ ನೋಡಿಕೊಂಡು ಹೋಗಿದ್ದಾರೆ. ಇತ್ತ ಬಾದಾಮಿ ಇನ್ನೋರ್ವ ಕಾಂಗ್ರೆಸ್ ಯುವ ಮುಖಂಡ ಮಹೇಶ್ ಹೊಸಗೌಡರ ಮನೆಯನ್ನೂ ಡಾ. ಯತೀಂದ್ರ ನೋಡಿದ್ದು, ಇವರು ಸಹ ಸಿದ್ದರಾಮಯ್ಯಗೆ ಉಚಿತ ಬಾಡಿಗೆ ಮನೆಕೊಡಲು ಸಿದ್ದರಾಗಿದ್ದಾರೆ ಎನ್ನಲಾಗಿದೆ.
ಮೂಲತಃ ಗುತ್ತಿಗೆದಾರರಾಗಿರೋ ಶಂಕರಗೌಡ ಕೆಳಗಿನಮನಿ, ಐತಿಹಾಸಿಕ ಬಾದಾಮಿ ಕ್ಷೇತ್ರದ ಅಭಿವೃದ್ದಿ ಜೊತೆಗೆ ಮಾಜಿ ಸಿಎಂ ಅನ್ನೋ ಕಾರಣಕ್ಕೆ ಉಚಿತ ಬಾಡಿಗೆ ಮನೆ ಕೊಡುವ ಮಹದಾಸೆ ಹೊಂದಿದ್ದೇನೆ ಎನ್ನುತ್ತಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಮನೆ ಮಾಡೋ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಉಚಿತ ಬಾಡಿಗೆ ಮನೆಯ ಡಬಲ್ ಆಫರ್ ಬಂದಿವೆ. ಆದರೆ ಸಿದ್ದರಾಮಯ್ಯ ಉಚಿತ ಬಾಡಿಗೆ ಮನೆ ಆಫರ್ ಸ್ವೀಕರಿಸ್ತಾರಾ? ಇಲ್ವಾ? ಅನ್ನೋದನ್ನು ಕಾದು ನೋಡಬೇಕಿದೆ.