ಬೆಂಗಳೂರು: ಸಿಎಂ ಸಿದ್ದರಾಮಯ್ಯನವರನ್ನು (CM Siddaramaiah) ಬೆಂಬಲಿಸಿ ರಾಜ್ಯಪಾಲರ (Thawar Chand Gehlot) ವಿರುದ್ಧ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಕೋಲಾರದ ಕಾಂಗ್ರೆಸ್ ಮುಖಂಡರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಸಂಘದ ವತಿಯಿಂದ ಇಂದು ಸುದ್ದಿಗೋಷ್ಠಿ ನಡೆಯುತ್ತಿತ್ತು. ಈ ವೇಳೆ ಕೋಲಾರ ಕಾಂಗ್ರೆಸ್ ಮುಖಂಡ ರವಿಚಂದ್ರನ್ (Ravichandran) ಅವರು ಮಾತನಾಡುತ್ತಿದ್ದರು. ಇದನ್ನೂ ಓದಿ: ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಸಾಹಿತಿಗಳು – ಪ್ರತಿಭಟನೆಗೆ ಕರೆ
ಮೈಕ್ ಹಿಡಿದು ಮಾತನಾಡುತ್ತಿದ್ದ ರವಿಚಂದ್ರನ್ ಅವರು ಕುಳಿತ ಚಯರ್‌ನಿಂದಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಕನ್ನಿಂಗ್ ಹ್ಯಾಮ್ ರಸ್ತೆಯ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪೋರ್ಟಿಸ್ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಕೋಲಾರದ ಚಿಂತಾಮಣಿ ಮೂಲದ ಸಿ.ಕೆ ರವಿಚಂದ್ರನ್ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಜೊತೆ ಓಡನಾಟ ಹೊಂದಿದ್ದರು. ಬೆಂಗಳೂರು ನಗರದ ಆರ್.ಆರ್ .ನಗರದ ಚನ್ನಸಂದ್ರದಲ್ಲಿ ವಾಸವಾಗಿದ್ದ ಇವರು ಅಮ್ಮ ಕಾನ್ವೆಂಟ್ ಹೆಸರಿನ ಶಾಲೆ ನಡೆಸುತ್ತಿದ್ದರು. ಸಿಎಂ ಸಿದ್ದರಾಮಯ್ಯ ಜೊತೆ ಸಹ ಓಡನಾಟ ಹೊಂದಿದ್ದ ಇವರು ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರಾಗಿ ನೇಮಕವಾಗಿದ್ದರು.