ನವದೆಹಲಿ: ಲೋಕಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಣ್ಣೀರು, ಗಾಲಿ ಜನಾರ್ದನ ರೆಡ್ಡಿ ಭ್ರಷ್ಟಾಚಾರದ ಬಳಿಕ ಮಂಗಳವಾರ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ವಿಷಯವೂ ಪ್ರಸ್ತಾಪವಾಯಿತು.
ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಭಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳಿಗೆ 350 ಕ್ಕೂ ಹೆಚ್ಚು ದೂರುಗಳನ್ನು ನೀಡಿದ್ದೇನೆ. ಆದರೆ ಕರ್ನಾಟಕದ ಎಸಿಬಿ ಮುಖ್ಯಸ್ಥರು ಸಿದ್ದರಾಮಯ್ಯ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಿಲ್ಲ. ಕಾರಣ ಅವರು ಸಿದ್ದರಾಮಯ್ಯ ಅಧೀನದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಆರೋಪಿಸಿದರು. ಇದಕ್ಕೆ ಕಾಂಗ್ರೆಸ್ ಸಂಸದರು ಭಾರೀ ಆಕ್ಷೇಪ ವ್ಯಕ್ತಪಡಿದರು.
Advertisement
ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಐಟಿ ದಾಳಿ ವಿಷಯವನ್ನು ಪ್ರಸ್ತಾಪಿಸಿದ ಆಂಧ್ರಪ್ರದೇಶದ ಟಿಡಿಪಿ ಸಂಸದ ಕೃಷ್ಟಪ್ಪ ನಿಮ್ಮಲ, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು. ಇನ್ನು ರಾಜಸ್ಥಾನ ಆಳ್ವಾರ್ ಜಿಲ್ಲೆಯಲ್ಲಿ ಗೋವು ಕಳ್ಳನೆಂದು ಭಾವಿಸಿ ಅಕ್ಬರ್ ಎಂಬಾತನ ಮೇಲೆ ಸಾಮೂಹಿಕ ಹಲ್ಲೆ ನಡೆಸಿದ್ದ ಪ್ರಕರಣ ಸಂಸತ್ತಿನ ಉಭಯ ಸದನಗಳಲ್ಲೂ ಪ್ರಸ್ತಾಪವಾಯಿತು.
Advertisement
ಗೃಹಸಚಿವ ರಾಜನಾಥ್ ಸಿಂಗ್, ಸಾಮೂಹಿಕ ಹಲ್ಲೆ ಪ್ರಕರಣಗಳ ತನಿಖೆಗಾಗಿ ಉನ್ನತ ಮಟ್ಟದ ತಂಡ ರಚಿಸಲಾಗಿದೆ. ಅಗತ್ಯವಿದ್ದಲ್ಲಿ ಕಾನೂನು ಜಾರಿಗೆ ಗಮನ ಹರಿಸಲಾಗುವುದು ಎಂದರು. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಈ ಮಧ್ಯೆ, ಸಂಸತ್ ಆವರಣದಲ್ಲಿ ಕೋತಿಗಳ ಕಾಟ ಹೆಚ್ಚಾಗಿದೆ ಅಂತಲೂ ಚರ್ಚೆ ನಡೆಯಿತು.