ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಷಡ್ಯಂತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ನಗರದ ಮಲ್ಲೇಶ್ವರಂನಲ್ಲಿ ನಡೆಯುತ್ತಿರುವ ವಿಶ್ವಕರ್ಮ ಯಜ್ಞ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೆಡಿಎಸ್ಸಿನವರು ರಾಹು, ಕೇತು ಹಾಗೂ ಶನಿಗಳು. ಹೀಗಾಗಿಯೇ ಸಿದ್ದರಾಮಯ್ಯನವರು ರಾಹು,ಕೇತು, ಶನಿ ಸೇರಿ ನನ್ನನ್ನು ಸೋಲಿಸಿದ್ರು ಅಂತಾ ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಹಾಗೂ ಜೆಡಿಎಸ್ಸಿನವರು ಷಡ್ಯಂತ್ರ ಮಾಡಿ ಚಾಮುಂಡೇಶ್ವರಿಯಲ್ಲಿ ಅವರನ್ನು ಸೋಲಿಸಿದ್ದಾರೆ ಎನ್ನುವ ಮೂಲಕ ಸಿದ್ದರಾಮಯ್ಯನವರ ಪರ ಬ್ಯಾಟಿಂಗ್ ಮಾಡಿದ್ದಾರೆ.
Advertisement
Advertisement
ಜೆಡಿಎಸ್ಸಿನವರು ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡರನ್ನು ಕಣಕ್ಕೆ ಇಳಿಸಬಾರದಿತ್ತು. ಬೇಕು ಎಂತಲೇ ಅವರನ್ನು ಕಣಕ್ಕೆ ಇಳಿಸಿ ಸಿದ್ದರಾಮಯ್ಯನವರನ್ನು ಸೋಲುವಂತೆ ಮಾಡಿದ್ದಾರೆ. ಇಂತಹ ಎಲ್ಲಾ ನೋವುಗಳನ್ನು ಸಹಿಸಿಕೊಂಡು ಸಿದ್ದರಾಮಯ್ಯನವರು ಅಲ್ಲಿರುವುದೇ ಆಶ್ಚರ್ಯ. ಕಾಲ ಬಂದಾಗ ಅವರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಅಲ್ಲದೇ ಅವರನ್ನು ರಾಜಕೀಯವಾಗಿ ದೂರವಿಡಲು ಷಡ್ಯಂತ್ರ ಸಹ ಮಾಡಿದ್ದಾರೆ. ಸಿದ್ದರಾಮಯ್ಯ ಹಾಗೂ ಅವರ ಸಮುದಾಯದವರಿಗೆ ಅಪಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಇದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ. ಕಾಲ ಬಂದಾಗ ಅವರು ಸೂಕ್ತ ತೀರ್ಮಾನವನ್ನೇ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
Advertisement
Advertisement
ಇದೇ ವೇಳೆ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಆರ್.ಅಶೋಕರನ್ನು ಸಮರ್ಥಿಸಿಕೊಂಡು ಮಾತನಾಡಿದ ಅವರು, ಅಶೋಕ್‍ರವರು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಚಿವ ಅನಂತ್ ಕುಮಾರ್ ಅನಿವಾರ್ಯ ಕಾರಣಗಳಿಂದ ಬರಲು ಸಾಧ್ಯವಾಗದೇ ಇದ್ದದ್ದು ನಮ್ಮ ಸೋಲಿಗೆ ಕಾರಣವಾಯಿತು. ವಿನಾಕಾರಣ ಅಶೋಕ್ ಮೇಲೆ ಕಲ್ಲು ಎಸೆಯೋದು ಸರಿಯಲ್ಲ. ನಂಬರ್ ಕಡಿಮೆ ಅಂತ ತಿಳಿದು ಮುಖಂಡರ ಜೊತೆ ಚರ್ಚೆ ಮಾಡಿ ಸಭಾತ್ಯಾಗ ಮಾಡಿದ್ದರು. ಎಲ್ಲಾ ಕಡೆ ಸಿಂಗಲ್ ಲಾರ್ಜ್ ಪಾಟಿ ಬರುತ್ತೆ ಅಂದುಕೊಂಡಿದ್ದೇವು ಆದರೆ ದೇವರ ಆಶೀರ್ವಾದ ಇಲ್ಲದ ಕಾರಣ ಅಧಿಕಾರ ಸಿಕ್ಕಿಲ್ಲ. ಪ್ರಜಾಪ್ರಭುತ್ವದಲ್ಲಿ 49 ಅಂದರೆ ಸೊನ್ನೆಗೆ ಸಮ, 51 ಬಂದರೆ ನೀರಿಗೆ ಸಮ. ಹೀಗಾಗಿ ನಾನು ಯಾರನ್ನು ದೂಷಿಸೋಕೆ ಹೋಗಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜಗುರು ದ್ವಾರಕನಾಥ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪನವರ ಆಸೆ ಈಡೇರಲಿ. ನಾನು ಯಾರ ದ್ವೇಷಿಯೂ ಅಲ್ಲ, ಯಡಿಯೂರಪ್ಪ ನನಗೂ ನಾಯಕರು. ಮತ್ತೆ ಈ ರಾಜ್ಯವಾಳುವಂತೆ ಅವರಿಗೆ ದೇವರು ಆಶೀರ್ವಾದ ಕೊಡಲಿ. ಒಬ್ಬ ಗುರುವಿಗೆ ಯಾರೂ ಕೂಡ ಮಾಜಿ ಅಲ್ಲ. ಹೀಗಾಗಿ ನಾನು ಯಡಿಯೂರಪ್ಪನವರನ್ನು ಮಾಜಿ ಅಂತಾ ಕರೆಯುವುದಿಲ್ಲ. ಯಡಿಯೂರಪ್ಪನವರಿಗೆ ನಾನು ಒಂದು ಕಿವಿ ಮಾತನ್ನು ಹೇಳುತ್ತೇನೆ. ಮುಂಬರುವ ದಿನಗಳಲ್ಲಿ ಬೆಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತದೆ. ಈ ಬಗ್ಗೆ ತ್ವರಿತಗತಿಯಲ್ಲಿ ಜನರಿಗೆ ಸ್ಪಂದಿಸುವಂತೆ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡಲಿ ಎಂದು ಭವಿಷ್ಯ ನುಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv