ಚಿತ್ರದುರ್ಗ: ಕಾಂಗ್ರೆಸ್ ಹಾಗೂ ಜೆಡಿಎಸ್ ಅಧ್ಯಕ್ಷರು ಸಮಿತಿಯಲ್ಲಿದ್ದರೆ ಮಾತ್ರ ಸಮನ್ವಯ ಸಮಿತಿ ಪರಿಪೂರ್ಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಬ್ಬೊಬ್ಬರ ಜಾಯಮಾನ ಒಂದೊಂದು ಥರ ಇರುತ್ತೆ. ಸಿದ್ದರಾಮಯ್ಯ ಸಿದ್ದರಾಮಯ್ಯನೇ, ವಿಶ್ವನಾಥ ವಿಶ್ವನಾಥನೇ. ಎರಡೂ ಪಕ್ಷದ ಅಧ್ಯಕ್ಷರು ಸಮಿತಿಯಲ್ಲಿ ಇಲ್ಲ ಅಂದರೆ ಏನು? ಸಿದ್ದರಾಮಯ್ಯನವರೇ ಸಮನ್ವಯ ಸಮಿತಿ ಅಧ್ಯಕ್ಷರು. ಅವರೇ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುತ್ತಾರೆ ಅನ್ನುವುದು ಅಸಾಧ್ಯ ಎಂದು ಸ್ಪಷ್ಟನೆ ನೀಡಿದರು.
Advertisement
Advertisement
ಬಿಜೆಪಿಯವರು ಜೆಡಿಎಸ್ ಹಾಗೂ ಕಾಂಗ್ರೆಸ್ಸಿನ ಮೈತ್ರಿ ಸರ್ಕಾರವನ್ನು ಅಪವಿತ್ರ ಮೈತ್ರಿ ಎಂಬಂತೆ ಬಿಂಬಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿಯವರು ಸಹ ಅಪವಿತ್ರ ಮೈತ್ರಿ ಮಾಡಿಕೊಂಡಿರಲಿಲ್ಲವೇ? ಬಿಜೆಪಿಯವರು ವಿರೋಧ ಪಕ್ಷದ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಪ್ರವಾಹ ಪೀಡಿತ ಕೊಡಗಿಗೆ ಅವರು ಏಕೆ ಹೋಗಿಲ್ಲ. ಕೇವಲ ರಾಜಕೀಯ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಬಿಜೆಪಿಯವರು ಸುಳ್ಳಿನ ಸೃಷ್ಟಿಕರ್ತರು. ಇದನ್ನೇ ಕೆಲವು ಮಾಧ್ಯಮಗಳು ದೊಡ್ಡದಾಗಿ ತೋರಿಸುತ್ತಿವೆ ಎಂದರು.
Advertisement
Advertisement
ರಾಷ್ಟ್ರೀಯ ಪಕ್ಷಗಳಿಂದ ಸಾಲಮನ್ನಾದಂತಹ ತೀರ್ಮಾನ ಅಸಾಧ್ಯ. ಪ್ರಾದೇಶಿಕ ಪಕ್ಷವಾದ್ದರಿಂದ ಜನರ ಸಮಸ್ಯೆಯನ್ನು ಆಲಿಸಿ ಸಾಲಮನ್ನಾ ನಿರ್ಧಾರ ಮಾಡಿದ್ದೇವೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅಗತ್ಯತೆ ತುಂಬಾ ಇದೆ. ಯಾವುದೇ ರಾಷ್ಟ್ರೀಯ ಪಕ್ಷಗಳು ಏನೇ ನಿರ್ಧಾರ ತೆಗೆದುಕೊಳ್ಳಬೇಕೆಂದರೂ ಹೈಕಮಾಂಡ್ ಮುಖ ನೋಡಬೇಕಾಗುತ್ತದೆ. ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಆಡಳಿತದ ಸಮ್ಮಿಶ್ರ ಸರ್ಕಾರ ಸಾಲಮನ್ನಾ ಘೋಷಣೆಮಾಡಿದೆ. ಈ ಮೊದಲು ರಾಜಕೀಯ ಗೊಂದಲಗಳು ಇದ್ದದ್ದು ನಿಜ. ಆದರೆ ಈಗ ರಾಜಕೀಯ ಗೊಂದಲಗಳ ಮೋಡ ಸರಿದಿದೆ. ಇನ್ನು ಹತ್ತು ದಿನಗಳಲ್ಲಿ ಜೆಡಿಎಸ್ ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಸಮಿತಿಗಳನ್ನು ಪುನರ್ ರಚನೆ ಮಾಡುವುದಾಗಿ ತಿಳಿಸಿದರು.
ಶಾಸಕ ಸುಧಾಕರ್ ಹಾಗೂ ನಾಗರಾಜ್ ಎಲ್ಲೂ ಹೋಗಲ್ಲ. ಬಿಜೆಪಿ ನಾಯಕರು ತುಂಬಾ ಅವಸರದಲ್ಲಿದ್ದು, ಅವರಿಗೆ ಲೋಕಸಭಾ ಚುನಾವಣೆಯೊಳಗೆ ಈ ಸರ್ಕಾರ ಪತನ ಮಾಡಬೇಕೆಂದು ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv