ಬೆಂಗಳೂರು: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಇನ್ನೂ ಸಹ ಅನೇಕ ಕಾಂಗ್ರೆಸ್ ನಾಯಕರು ತಮ್ಮ ಅಸಮಾಧಾನದಲ್ಲಿದ್ದು, ಮಂಗಳವಾರ ಮಾಜಿ ಸಿಎಂ ಸಿದ್ದರಾಮಯ್ಯ ಕರೆದ ಔತನ ಕೂಟಕ್ಕೂ ಗೈರಾಗಿದ್ದಾರೆ.
ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಸತೀಶ್ ಜಾರಕಿಹೊಳಿ, ಹೆಚ್‍ಕೆ ಪಾಟೀಲ್ ಬರಲೇ ಇಲ್ಲ. ತಮ್ಮ ಮಗಳನ್ನು ಗೆಲ್ಲಿಸಿದ ಜಯನಗರದಲ್ಲಿ ಮತದಾರರಿಗೆ ಅಭಿನಂದನೆ ಸಲ್ಲಿಸೋದ್ರಲ್ಲಿ ನಾನು ಬ್ಯುಸಿ ಆಗಿದ್ದೇನೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ರೆ, ಮಂತ್ರಿ ಸ್ಥಾನ ಕೊಡಿಸಿದ್ರೆ ಹೋಗ್ತಿದೆ, ಈಗ್ಯಾಕೆ ಹೋಗ್ಲಿ ಅನ್ನೋದು ಬೆಳಗಾವಿಯಲ್ಲಿರುವ ಜಾರಕಿಹೊಳಿ ಅವರ ಅಭಿಪ್ರಾಯವಂತೆ.
ಜಯಾಮಾಲಾಗೆ ಪರಿಷತ್ ಸಭಾ ನಾಯಕಿ ಸ್ಥಾನ ಕೊಟ್ಟಿರುವ ಕಾರಣ ಹೆಚ್‍ಎಂ ರೇವಣ್ಣ, ವಿ ಎಸ್ ಉಗ್ರಪ್ಪ, ಪ್ರತಾಪ್‍ಚಂದ್ರ ಶೆಟ್ಟಿ ಅಸಮಾಧಾನಗೊಂಡಿದ್ದು, ಕಲಾಪದ ಹೊರಗೆಯೇ ಹೆಚ್ಚು ಕಾಲ ಕಳೆದಿದ್ದಾರೆ. ಹೆಚ್‍ಕೆ ಪಾಟೀಲ್. ಮೊದಲ ದಿನವಷ್ಟೇ ಸದನದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ರೋಷನ್‍ಬೇಗ್ ಇದೂವರೆಗೂ ಸದನಕ್ಕೆ ಬಂದೇ ಇಲ್ಲ.
ಹಿರಿಯ ನಾಯಕ ಎಸ್.ಆರ್.ಪಾಟೀಲ್ ಮಾತ್ರ ತಮಗೇನು ಸಂಬಂಧ ಇಲ್ಲದಂತೆ ಸದನಕ್ಕೆ ಬಂದು ಮೌನವಾಗಿಯೇ ಕುಳಿತು ಹೋಗುತ್ತಿದ್ದಾರೆ. ಎಂ.ಬಿ.ಪಾಟೀಲ್, ಬಿ.ಸಿ.ಪಾಟೀಲ್, ಶಾಮನೂರು ಶಿವಶಂಕರಪ್ಪ ಸಹ ಮೌನವಾಗಿ ಸದನಕ್ಕೆ ಬಂದು ಹಿಂದಿರುಗುತ್ತಿದ್ದಾರೆ.