ಬೆಂಗಳೂರು: ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನ್ (MRI Scan) ಹಾಗೂ ಡಯಾಲಿಸಿಸ್ (Dialysis) ಯಂತ್ರಗಳನ್ನು ಸಮರ್ಪಕವಾಗಿ ಅಳವಡಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆರೋಗ್ಯ ಇಲಾಖೆ ಅಧಿಕಾರಿಗಳನ್ನು (Health Department) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಉದ್ದೇಶ ಸಮರ್ಪಕವಾಗಿ ಜಾರಿಯಾಗಿಲ್ಲ. ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಇದನ್ನೂ ಮುಂದಿನ ಸಭೆಯೊಳಗೆ ಸರಿಪಡಿಸಬೇಕು ಎಂದು ಆದೇಶಿಸಿದ್ದಾರೆ. ಇದನ್ನೂ ಓದಿ: Breakingː ಜಮ್ಮು-ಕಾಶ್ಮೀರದಲ್ಲಿ 5.4 ತೀವ್ರತೆಯ ಭೂಕಂಪ
ಅಲ್ಲದೇ ರಾಷ್ಟ್ರೀಯ ಆರೋಗ್ಯ ಅಭಿಯಾನ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಸೇವೆಯ ಲಭ್ಯತೆ ಕುರಿತಂತೆ ಪ್ರತ್ಯೇಕವಾಗಿ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಆರೋಗ್ಯ ಮಿಷನ್‍ನ ಅನುದಾನ ಸಕಾಲದಲ್ಲಿ ವೆಚ್ಚವಾಗದಿರುವ ಬಗ್ಗೆ, ಆರೋಗ್ಯ ವ್ಯವಸ್ಥೆ ಬಲಪಡಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು. ಈ ಯೋಜನೆಯಡಿ 52% ರಷ್ಟು ತಜ್ಞ ವೈದ್ಯರ ಕೊರತೆ ಇದೆ. 31% ರಷ್ಟು ವೈದ್ಯರ ಕೊರತೆ ಹಾಗೂ 18% ರಷ್ಟು ನರ್ಸ್ ಸಿಬ್ಬಂದಿ ಕೊರತೆ ಇರುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ವೇತನ ಹೆಚ್ಚಳ ಮಾಡುವ ಬಗ್ಗೆ ಪರಿಶೀಲಿಸಿ, ಖಾಲಿ ಇರುವ ಈ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ನಿರಂತರವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಪ್ರಗತಿ ಪರಿಶೀಲನೆ ಮಾಡಬೇಕು. ನಿಗದಿತ ಗುರಿ ಸಾಧನೆಯನ್ನು ಖಾತರಿ ಪಡಿಸಬೇಕು ಹಾಗೂ ಅನುದಾನ ಸಕಾಲದಲ್ಲಿ ಬಳಕೆ ಮಾಡಬೇಕು. ಕಳೆದ ಒಂದು ವರ್ಷದಲ್ಲಿ ನಿಗಮಕ್ಕೆ 5 ಎಂಡಿ ನೇಮಕ ಮಾಡಿರುವುದರಿಂದ ಸಮಸ್ಯೆ ಆಗಿರುವುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದರು. ನಮ್ಮ ಸರ್ಕಾರದ ಅವಧಿಯಲ್ಲಿ ಈ ರೀತಿ ಆಗುವುದಿಲ್ಲ. ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕನಿಷ್ಠ 2 ವರ್ಷ ಸೇವೆ ಸಲ್ಲಿಸಬೇಕು ಎಂದು ಇಲಾಖೆಯ ಆಯುಕ್ತರಿಗೆ ಸೂಚಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡಜನರಿಗೆ ಈ ವಿಶೇಷ ಸೇವೆಗಳನ್ನು ಒದಗಿಸದಿದ್ದರೆ ಅವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಹೇಗೆ ಸಾಧ್ಯ? ಗ್ರಾಮೀಣ ಪ್ರದೇಶದಲ್ಲಿ ವೈದ್ಯರಿಗೆ ಕಟ್ಟಿಸಿರುವ ವಸತಿಗೃಹದಲ್ಲಿ ಯಾವ ವೈದ್ಯರೂ ಉಳಿದುಕೊಳ್ಳುತ್ತಿಲ್ಲ ಈ ಎಲ್ಲಾ ಸಮಸ್ಯೆಗಳು ಮೂರು ತಿಂಗಳಲ್ಲಿ ಸರಿಪಡಿಸಬೇಕು. ಇದು ಮುಂದುವರೆದರೆ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 70,000 ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ