ಬೆಂಗಳೂರು: ಕಾಂಗ್ರೆಸ್ ನಾಯಕರು ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಕಳೆದ 13 ತಿಂಗಳಿನಿಂದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರ ಮಾಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಿಎಸ್‍ವೈ ಆಡಿಯೋ ಸುಳ್ಳಾ? ಅಥವಾ ಶಾಸಕರನ್ನ ಅಶ್ವಥ್ ನಾರಾಯಣ್ ಮುಂಬೈಗೆ ಕರೆದೊಯ್ದಿದ್ದು ಸುಳ್ಳಾ? ಜಾಧವ್ ಬಿಜೆಪಿ ಸೇರಿರುವುದು ಸುಳ್ಳೇ ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆನಂದ್ ಸಿಂಗ್ ಬಳಿ ನಾನೇನು ಮಾತಾಡಿಲ್ಲ. ಅವರಿಗೆ ಮನಪರಿವರ್ತನೆ ಆಗಿ ಅವರೇ ಮತ್ತೆ ಬರಬೇಕು. ರಾಜೀನಾಮೆ ನೀಡುರುವ ಮುನ್ನ ಸಮಸ್ಯೆ ಇದ್ದರೆ ನಮಗೆ ಹೇಳಬೇಕಿತ್ತು. ಕಳೆದ ಒಂದು ವರ್ಷದಲ್ಲಿ ಎಷ್ಟು ಸರಿ ನಮ್ಮ ಬಳಿ ಅವರು ಮಾತನಾಡಿಲ್ಲ. ಆದರೆ ಸದ್ಯ ರಾಜೀನಾಮೆ ನೀಡಿ ಜಿಂದಾಲ್ ವಿಷಯಕ್ಕೆ ಎಂಬುವುದು ನೆಪ ಮಾತ್ರ ಎಂದರು.
Advertisement
Advertisement
ಶಾಸಕರ ರಾಜೀನಾಮೆ ವಿಚಾರದಲ್ಲಿ ನಾನು ರಮೇಶ್ ಕುಮಾರ್ ಅವನರನ್ನು ನಂಬುತ್ತೇನೆ. ಆದರೆ ರಮೇಶ್ ಜಾರಕಿಹೊಳಿಯನ್ನ ನಂಬಲ್ಲ. ಅವರನ್ನು ಹಲವು ಬಾರಿ ಮಾತನಾಡಿದ್ದೇನೆ. ಅವರ ಮನವೊಲಿಕೆ ಪ್ರಯತ್ನ ಮಾಡಿ ಸಾಕಾಗಿದೆ. ಈಗ ಬಿಟ್ಟು ಬಿಟ್ಟಿದ್ದೇನೆ ಎಂದರು.
Advertisement
ಕೇಂದ್ರ ಬಜೆಟ್ ಕುರಿತ ಪ್ರತಿಕ್ರಿಯೆ ನೀಡಿ, ನಿರ್ಮಲಾ ಸೀತಾರಾಮನ್ ದೇಶದ ಎರಡನೇ ಆರ್ಥಿಕ ಸಚಿವೆಯಾಗಿ ಮಂಡಿಸಿದ ಬಜೆಟ್ ಜನರಿಗೆ ನಿರಾಸೆಯಾಗಿದೆ. 5 ವರ್ಷಗಳ ಹಿಂದೆ ರೈತರ ಆದಾಯವನ್ನ ದುಪ್ಪಟ್ಟು ಮಾಡುತ್ತೇವೆ ಎಂದಿದ್ದ ಭರವಸೆ ಹುಸಿಯಾಗಿದೆ. ಮಳೆ ಇಲ್ಲದೆ ತಮ್ಮ ಬೆಳೆಗೆ ಬೆಲೆ ಇಲ್ಲದೆ ರೈತರು ದುಸ್ಥಿತಿಯಲ್ಲಿದ್ದಾರೆ. ಆದರೆ ಅದಕ್ಕೆ ಯಾವುದೇ ನೆರವು ಸಿಕ್ಕಿಲ್ಲ. ನಿರುದ್ಯೋಗ ಸಮಸ್ಯೆ ಪರಿಹರಿಸಲು ಅವರ ಬಳಿ ಯಾವುದೇ ಪರಿಹಾರ ಇಲ್ಲ. ಬಜೆಟ್ ನಲ್ಲಿ ಬಣ್ಣ ಬಣ್ಣದ ಮಾತನಾಡಿ ಕೇವಲ ಪದ ಪುಂಜ ಬಳಸಿದ್ದಾರೆ ಅಷ್ಟೇ ಎಂದರು.
Advertisement
ಕಪ್ಪು ಹಣ ತರ್ತೀವಿ ಎಂದವರು ಆ ಬಗ್ಗೆ ಮಾತನಾಡಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಅಂದರು ಯಾವುದು ಮಾಡಿಲ್ಲ. ಬಜೆಟ್ ಮಂಡನೆ ವೇಳೆ ಬಸವಣ್ಣನ ವಚನ ಹೇಳಿದ್ದೆ ಕರ್ನಾಟಕಕ್ಕೆ ಸಿಕ್ಕ ಕೊಡುಗೆ. ರಾಜ್ಯದ ರಾಜ್ಯಸಭಾ ಸದಸ್ಯರಾಗಿ ನಿರ್ಮಲಾ ಸೀತಾರಾಮನ್ ಅವರು ಏನು ಕೊಟ್ಟಿಲ್ಲ. 5 ವರ್ಷದ ಸಾಧನೆ, ಮುಂದೆ ಏನು ಮಾಡುತ್ತೇವೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆಕಾಶ ನೀಲಿಯಾಗಿದೆ. ಭೂಮಿ ದುಂಡಾಗಿದೆ ಎಂದು ಹೇಳಲು ಇವರೇ ಬೇಕೇ ಎಂದು ಟಾಂಗ್ ನೀಡಿದರು.