-ಒಂದು ತಿಂಗಳಿನಿಂದ ರಾಜ್ಯದಲ್ಲಿ ಸರ್ಕಾರ ಇಲ್ಲ
ಮೈಸೂರು: ಬಿಜೆಪಿ ಸರ್ಕಾರ ಅನೈತಿಕ ಶಿಶುವಾಗಿದ್ದು, ಹಿಂಬಾಗಿಲಿನಿಂದ ಬಂದು ಅಧಿಕಾರದಲ್ಲಿ ಕುಳಿತಿದ್ದಾರೆ. ಒಂದು ಅತೃಪ್ತ ಶಾಸಕರು ಬಿಜೆಪಿ ನಾಯಕರಿಗೆ ಧಮ್ಕಿ ಹಾಕುತ್ತಿದ್ದಾರೆ. ಹಾಗಾಗಿ ಸಚಿವರಾದರೂ ಖಾತೆ ಹಂಚಿಕೆ ಆಗಿಲ್ಲ. ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಭೀಕರವಾದ ಪ್ರವಾಹ ಮತ್ತು 42 ತಾಲೂಕುಗಳಲ್ಲಿ ಬರಗಾಲವಿದೆ. ಯಡಿಯೂರಪ್ಪನವರಿಂದ ಕೇಂದ್ರ ಸರ್ಕಾರದಿಂದ ಹಣ ತರಲು ಸಾಧ್ಯವಾಗುತ್ತಿಲ್ಲ. ಪ್ರಧಾನಿಗಳು ಸಹ ಒಂದು ದಿನ ಪ್ರವಾಹದ ಸ್ಥಳಗಳಿಗೆ ಭೇಟಿ ನೀಡಲಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿಯವರಿಗೆ ಜನರು 113 ಸ್ಥಾನಗಳನ್ನು ನೀಡಿಲ್ಲ. ಜನಾದೇಶ ಮತ್ತು ಸಂವಿಧಾನಾತ್ಮಕವಾಗಿ ಈ ಸರ್ಕಾರ ರಚನೆಯಾಗಿಲ್ಲ. ಹಿಂಬಾಗಿಲಿನಿಂದ ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಹಾಗಾಗಿ ಅತೃಪ್ತರ ಗುಂಪು ಬಿಜೆಪಿಯವರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದೆ. ಹಾಗಾಗಿ ಸಚಿವರಿಗೆ ಖಾತೆ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಹೈಕಮಾಂಡ್ ಗೆ ಯಡಿಯೂರಪ್ಪನವರು ಒಲ್ಲದ ಶಿಶು. ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ ಅತೃಪ್ತ ಶಾಸಕರನ್ನು ಅನರ್ಹಗೊಳಿಸಬೇಕೆಂದು ದಿನೇಶ್ ಗುಂಡೂರಾವ್ ಮತ್ತು ನಾನು ಸ್ಪೀಕರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಅರ್ಜಿ ಹಿನ್ನೆಲೆಯಲ್ಲಿ ಸ್ಪೀಕರ್ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದರು ಎಂದರು.
Advertisement
Advertisement
ಸಂತ್ರಸ್ತರಿಗೆ ತಾತ್ಕಲಿಕ ವ್ಯವಸ್ಥೆ ಮಾಡುವ ಬದಲು ಸಿಎಂ ಪದೇ ಪದೇ ದೆಹಲಿಗೆ ಹೋಗುತ್ತಿದ್ದಾರೆ. ಅಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಇವರನ್ನ ಭೇಟಿ ಆಗುತ್ತಿಲ್ಲ. ಅಧಿಕಾರವನ್ನು ಕೇಂದ್ರಿಕೃತ ಮಾಡಿಕೊಳ್ಳುವುದು ಮತ್ತು ಸರ್ವಾಧಿಕಾರದಲ್ಲಿ ನಂಬಿಕೆ ಹೊಂದಿರುವ ಪಕ್ಷ ಬಿಜೆಪಿ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಬಿಜೆಪಿಯವರಿಗೆ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಏನು ಗೊತ್ತು ಎಂದು ವ್ಯಂಗ್ಯ ಮಾಡಿದರು.