ತುಮಕೂರು: ಸಿದ್ದಂಗಂಗಾ ಮಠದಲ್ಲಿ ಪ್ರತಿ ವರ್ಷದಂತೆ ಶಿವರಾತ್ರಿಯ ಮರು ದಿನ ನಡೆಯುವ ಸಿದ್ದಲಿಂಗೇಶ್ವರ ರಥೋತ್ಸವ ಭಕ್ತಿ ಭಾವದಿಂದ ನೆರವೇರಿದೆ. ಪ್ರತಿ ವರ್ಷದಂತೆ ಸಿದ್ದಗಂಗಾ ಮಠದ ಸೇವೆಗಳಲ್ಲಿ ಅವಿಭಾಜ್ಯ ಅಂಗವಾಗಿ ನಡೆದುಕೊಂಡು ಬಂದಿರೋ ಸಿದ್ದಲಿಂಗೇಶ್ವರ ಜಾತ್ರೆ ಈ ಬಾರಿಯೂ ಅದ್ಧೂರಿಯಾಗಿ ನಡೆಯಿತು.
ಶಿವರಾತ್ರಿಯ ಮಾರನೇ ದಿನವಾದ ಇಂದು ಮಧ್ಯಾಹ್ನ 12ರ ಸುಮಾರಿಗೆ ವೃಷಭ ಲಗ್ನದಲ್ಲಿ ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಶಿವೈಕ್ಯ ಸಿದ್ದಗಂಗಾ ಶ್ರೀಗಳ ಗದ್ದುಗೆ ಆವರಣದಿಂದ ಸಾಗಿದ ರಥವನ್ನ ಸುಮಾರು 250 ಮೀಟರ್ ಗಳಷ್ಟು ಎಳೆದು ಭಕ್ತರು ಪಾವನರಾದರು. ಇದೇ ವೇಳೆ ರಥಕ್ಕೆ ಬಾಳೆಹಣ್ಣು, ದವಳ ಎಸೆದ ಭಕ್ತರು ಜೈಕಾರ ಕೂಗಿ ಭಕ್ತಿ ಸಮರ್ಪಿಸಿದ್ರು.
ಮಠದ ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಭೋಜನ ಏರ್ಪಡಿಸಲಾಗಿತ್ತು. ನಿನ್ನೆಯಿಂದ ದಾಸೋಹದಲ್ಲಿ ಪಾಯಸ, ಮಾಲ್ದಿ ಪುಡಿ, ಬೂಂದಿ, ತಂಬಿಟ್ಟು ಬಡಿಸಲಾಗಿದೆ. ಮಠದ ನಾನಾ ಕಡೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿ ವರ್ಷ ಜಾತ್ರೆಯಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳಿಂದ ರಥೋತ್ಸವಕ್ಕೆ ಚಾಲನೆ ಸಿಗುತ್ತಿತ್ತು. ಆದರೆ ಈ ಬಾರಿ ಅವರಿಲ್ಲದ ಭಾವ ಭಕ್ತರಲ್ಲಿ ಎದ್ದು ಕಾಣುತ್ತಿತ್ತು. ರಥೋತ್ಸವವನ್ನ ಕಣ್ತುಂಬಿಕೊಂಡ ಭಕ್ತರು ಶಿವೈಕ್ಯ ಶ್ರೀಗಳನ್ನ ನೆನೆದು, ಶ್ರೀಗಳ ಗದ್ದುಗೆಗೆ ನಮಿಸಿ ಸಾಗಿದರು.
ನಡೆದಾಡೋ ದೇವರು ಶ್ರೀ ಶಿವಕುಮಾರಸ್ವಾಮೀಜಿಗಳಿಲ್ಲದ ಮೊದಲ ಜಾತ್ರೆ ನೆರವೇರಿದೆ. ಸಾವಿರಾರು ಮಂದಿ ಜಾತ್ರೆಯಲ್ಲಿ ಭಾಗಿಯಾಗಿ ಭಕ್ತಿಯಲ್ಲಿ ಮಿಂದೆದ್ದರು. ಒಟ್ಟಾರೆಯಾಗಿ ಇಡೀ ಜಾತ್ರೆಯಲ್ಲಿ ನಡೆದಾಡೋ ದೇವರ ಕೊರತೆ ಇದ್ದುದನ್ನು ಭಕ್ತರು ನೆನೆದರು. ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ ಸೇರಿದಂತೆ ಅನೇಕ ಗಣ್ಯರು ಇದೇ ವೇಳೆ ಉಪಸ್ಥಿತರಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv