ದಾವಣಗೆರೆ: ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ತುಮಕೂರು ಸಿದ್ದಗಂಗಾ ಮಠಕ್ಕೆ ಬರೋಬ್ಬರಿ 11 ಟನ್‍ಕ್ಕಿಂತ ಹೆಚ್ಚು ಅಕ್ಕಿಯನ್ನು ದಾವಣಗೆರೆಯ ಸಿದ್ದಗಂಗಾ ವಿದ್ಯಾಸಂಸ್ಥೆ ಕಾಣಿಕೆಯಾಗಿ ನೀಡಿದೆ.
ಇದೇ ತಿಂಗಳ 31ರಂದು ತುಮಕೂರು ಸಿದ್ದಗಂಗಾ ಮಠದಲ್ಲಿ ನಡೆಯವ ಶ್ರೀಗಳ ಪುಣ್ಯಾರಾಧನೆಗೆ ಲಕ್ಷಾಂತರ ಮಂದಿ ಭಕ್ತರು ಬರುತ್ತಾರೆ. ಈ ಕುರಿತು ಮಾಹಿತಿ ತಿಳಿದ ಬಳಿಕ ಸಿದ್ದಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಪೋಷಕರು ಸ್ವಯಂ ಪ್ರೇರಿತರಾಗಿ ಬಂದು ಮಠಕ್ಕೆ ತಮ್ಮ ಕೈಲಾದ ಕಾಣಿಕೆ ನೀಡುತ್ತಿದ್ದಾರೆ. ನಮ್ಮೊಂದಿಗೆ ಕೈ ಜೋಡಿಸಿದ್ದಾರೆ ಎಂದು ಸಿದ್ದಗಂಗಾ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.
ಈಗಾಗಲೇ ಸಿದ್ದಗಂಗಾ ವಿದ್ಯಾಸಂಸ್ಥೆಗೆ ಮಾರುಕಟ್ಟೆಯಿಂದ ಸಾಕಷ್ಟು ಪ್ರಮಾಣದಲ್ಲಿ ತರಕಾರಿ ಹಾಗೂ ಅಡುಗೆ ಸಾಮಾಗ್ರಿಗಳು ಕಾಣಿಕೆ ರೂಪದಲ್ಲಿ ಬಂದಿದ್ದು, ಎಲ್ಲವನ್ನು ಲಾರಿ ಮುಖಾಂತರ ಸಿದ್ದಗಂಗಾ ಮಠಕ್ಕೆ ರವಾನೆ ಮಾಡಲಾಗುತ್ತದೆ.
ಸಿದ್ದಗಂಗಾ ವಿದ್ಯಾಸಂಸ್ಥೆಯಿಂದ ಮೊದಲು 111 ಚೀಲ ಅಕ್ಕಿಯನ್ನು ಸಿದ್ದಗಂಗಾ ಮಠಕ್ಕೆ ನೀಡಲು ನಿರ್ಧರಿಸಿದ್ದರು. ಆದ್ರೆ ವಿದ್ಯಾರ್ಥಿಗಳ ಪೋಷಕರು ಸ್ವಯಂ ಪ್ರೇರಿತರಾಗಿ ಆಗಮಿಸಿ ಕೈ ಜೋಡಿಸಿದಕ್ಕೆ ಈಗ 11,111 ಕೆಜಿ ಅಕ್ಕಿ ಸಂಗ್ರಹವಾಗಿದ್ದು, ಇದನ್ನು ಕಾಣಿಕೆಯಾಗಿ ಸಿದ್ದಗಂಗಾ ಮಠಕ್ಕೆ ಕಳುಹಿಸುತ್ತೇವೆ. ಇದು ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ವತಿಯಿಂದ ಶ್ರೀಗಳ ಪುಣ್ಯಾರಾಧನೆಗೆ ಒಂದು ಅಳಿಲು ಸೇವೆ ಎಂದು ಸಿದ್ದಗಂಗಾ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಹೇಳಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv