ತುಮಕೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ(111) ಸೋಮವಾರ ನಿಧನರಾಗಿದ್ದಾರೆ. ನಡೆದಾಡುವ ದೇವರೇ ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಈಗಾಗಲೇ ನಾಡಿನಾದ್ಯಂತ ಮೌನ ಆವರಿಸಿದ್ದು, ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತರು ಕಾಯುತ್ತಿದ್ದಾರೆ. ಸಿದ್ದಗಂಗಾ ಮಠದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಶಾಂತಿಯಿಂದ ಇರಬೇಕು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
ಏಪ್ರಿಲ್ 1, 1908ರಲ್ಲಿ ಮಾಗಡಿ ತಾಲೂಕಿನ ವೀರಾಪುರದಲ್ಲಿ ಶಿವಕುಮಾರ ಸ್ವಾಮೀಜಿ ಜನಿಸಿದ್ದರು. ವೀರಾಪುರದ ಹೊನ್ನೇಗೌಡ, ಗಂಗಮ್ಮ ದಂಪತಿಗೆ ಜನಿಸಿದ ಇವರ ಬಾಲ್ಯದ ಹೆಸರು ಶಿವಣ್ಣ ಆಗಿತ್ತು. ಮರಳಿನ ಮೇಲೆ ಅಕ್ಷರ ಬರೆಯುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭಗೊಂಡಿತ್ತು. ಪ್ರಾಥಮಿಕ ಶಾಲಾ ದಿನಗಳಲ್ಲೇ ತಾಯಿ ಕಳೆದುಕೊಂಡ ಶಿವಣ್ಣ, ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣ 1922ರಿಂದ ತುಮಕೂರಿನ ಸರ್ಕಾರಿ ಪ್ರೌಢ ಶಿಕ್ಷಣ, 1926ರಲ್ಲಿ ಮೆಟ್ರಿಕ್ಯುಲೇಷನ್ ಪೂರ್ಣ ಬಳಿಕ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಓದಿದ್ದರು.
Advertisement
1930ರ ನವೆಂಬರ್ 11 ರಂದು ಸಿದ್ದಗಂಗಾ ಮಠದ ಶ್ರೀ ಮರುಳಾರಾಧ್ಯ ಸ್ವಾಮಿಗಳವರ ಸಮಾಧಿ ಕ್ರಿಯೆಗೆ ಬಂದಾಗ ಶ್ರೀ ಉದ್ದಾನ ಶಿವಯೋಗಿಗಳವರ ಕೃಪಾದೃಷ್ಟಿಗೆ ಒಳಗಾಗಿದ್ದರು. ಬಳಿಕ 1930ರ ಮಾ.3ರಂದು ಸಿದ್ದಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಉದ್ದಾನ ಶ್ರೀಗಳು ಶಿವಣ್ಣ ಅವರನ್ನು ಆಯ್ಕೆ ಮಾಡಿದ್ದರು.
Advertisement
ಆಗಿದ್ದು ಏನು?
ಸ್ಟಂಟ್ ಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಡಿಸೆಂಬರ್ 1ರಂದು ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಆಗಮಿಸಿದ್ದ ಶ್ರೀಗಳು ವ್ಹೀಲ್ ಚೇರ್ ನಲ್ಲಿ ಕುಳಿತುಕೊಳ್ಳಲು ಒಪ್ಪದೇ ನಡೆದುಕೊಂಡು ಹೋಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸಿದ್ದಗಂಗಾ ಶ್ರೀಗಳನ್ನು ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸತತ 13 ದಿನಗಳ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಶ್ರೀಗಳು ಡಿ.19 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮಠ ತಲುಪಿದ್ದರು. ರೇಲಾ ಆಸ್ಪತ್ರೆಯಲ್ಲಿ ಡಾ. ಮೊಹಮ್ಮದ್ ರೇಲಾ ನೇತೃತ್ವದಲ್ಲಿ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಸತತ 2 ಗಂಟೆಗಳ ಕಾಲ ವೈದ್ಯರು ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದರು.
ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಶ್ರೀಗಳು ಬೇಗನೇ ಗುಣಮುಖರಾಗಲು ಜನವರಿ 3 ರಂದು ಸಿದ್ದಗಂಗಾ ಆಸ್ಪತ್ರೆಗೆ ಕರೆ ತರಲಾಗಿತ್ತು. ಮಠದ ವಾತಾವರಣದಲ್ಲಿ ಶ್ರೀಗಳಿಗೆ ಸೋಂಕು ತಗಲುವ ಸಾಧ್ಯತೆ ಇದ್ದು, ಮಠಕ್ಕೆ ವಿಐಪಿಗಳು ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಆದ್ದರಿಂದ ಆಸ್ಪತ್ರೆಗೆ ಶಿಫ್ಟ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ನಾಡಿನ ಭಕ್ತರೂ ಇದನ್ನು ಅನ್ಯತ ತಿಳಿದುಕೊಳ್ಳಬಾರದು. ಶ್ರೀಗಳ ಆರೋಗ್ಯ ಉತ್ತಮವಾಗಿ ಚೇತರಿಕೆ ಆಗುತ್ತಿದೆ. ವಿಐಪಿಗಳ ಭೇಟಿಗೂ ಅವಕಾಶ ನಿರಾಕರಿಸಲಾಗಿದೆ ಎಂದು ಕಿರಿಯ ಶ್ರೀಗಳು ಸ್ಪಷ್ಟಪಡಿಸಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಮಠಕ್ಕೆ ತನ್ನನ್ನು ಕರೆದುಕೊಂಡು ಹೋಗುವಂತೆ ಸೂಚನೆ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಜ.16 ರಂದು ಮಠಕ್ಕೆ ಶಿಫ್ಟ್ ಮಾಡಲಾಗಿತ್ತು. ಮಠದಲ್ಲೇ ಐಸಿಯು ಮಾದರಿಯಲ್ಲೇ ಕೊಠಡಿಯನ್ನು ನಿರ್ಮಿಸಿ ಅಲ್ಲೇ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತಿತ್ತು.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳಿಗೆ ಡಾ.ಪರಮೇಶ್ ನೇತೃತ್ವದ ತಂಡ ಚಿಕಿತ್ಸೆ ನೀಡುತಿತ್ತು. ಜ.21 ಸೋಮವಾರ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಮಠಕ್ಕೆ ದೊಡ್ಡ ಪ್ರಮಾಣದ ಭಕ್ತರು ಮತ್ತು ಮಕ್ಕಳು ಆಗಮಿಸತೊಡಗಿದರು. ಆದ್ದರಿಂದ ಮುಂಜಾಗೃತಾ ಕ್ರಮವಾಗಿ ಸಿದ್ದಗಂಗಾ ಮಠಕ್ಕೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಭಕ್ತರು ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದ ಕೋಣೆಯ ಕಿಟಿಕಿಯ ಮೂಲಕ ದರ್ಶನ ಪಡೆದು ಹೋಗುತ್ತಿದ್ದರು. ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಶ್ರೀಗಳಿಗೆ ರಕ್ತದ ಒತ್ತಡ ಮತ್ತು ಉಸಿರಾಟದಲ್ಲಿ ಕೊಂಚ ಏರುಪೇರು ಕಂಡು ಬಂದಿದ್ದು, ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.
ಮಠಕ್ಕೆ ಮತ್ತೆ ಶಿಫ್ಟ್ ಆದ ಬಳಿಕ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ತಮ್ಮನ್ನು ನೋಡಲು ಬಂದ ಭಕ್ತರನ್ನು ಕಣ್ತೆರೆದು ವೀಕ್ಷಿಸುತ್ತಿದ್ದರು. ಅಷ್ಟೇ ಅಲ್ಲದೆ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಶ್ರೀಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಕಣ್ಣು ತೆರೆದು ಮುಗುಳ್ನಕ್ಕಿದ್ದರು. ಕಿರಿಯ ಶ್ರೀಗಳ ಸಹಾಯದೊಂದಿಗೆ ಇಷ್ಟಲಿಂಗ ಪೂಜೆಯಲ್ಲಿ ನಡೆದಾಡುವ ದೇವರು ಭಾಗಿಯಾಗಿ, ಅವರ ಪಕ್ಕದಲ್ಲೇ ಕುಳಿತು ಕಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದರು.