ಸಿದ್ದಗಂಗಾ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು ಸಹಜ ಸಾತ್ವಿಕ ರೂಪದವು. ಸಿದ್ದಗಂಗಾ ಕ್ಷೇತ್ರಕ್ಕೆ ಬರುವುದೇ ಜನ ನೆಮ್ಮದಿಯನ್ನು ಅರಸಿಕೊಂಡು. ಇಲ್ಲಿ ಪಡೆಯುವ ನೆಮ್ಮದಿ ಅದೆಲ್ಲಿಯೂ ಸಿಗಲಾರದು ಎನ್ನುವ ನಂಬಿಕೆ ಕ್ಷೇತ್ರದ ಭಕ್ತರದ್ದು. ಅದೊಂದು ಅಸದೃಶ್ಯ, ಅನಿರ್ವಚನೀಯ ಭಾವನಾತ್ಮಕ ನೆಮ್ಮದಿ.
ಇಲ್ಲಿ ಪ್ರತಿ ಶುಕ್ರವಾರ ಶ್ರೀಮಠದ ಜಗಲಿಯಲ್ಲಿ ಸಿದ್ದಗಂಗಾ ಶ್ರೀಗಳು ಹಳೆಯ ಕಾಲದ ಮಂಚವೊಂದಲ್ಲಿ ಕೂತು ಅರಸಿ ಬರುವ ದುಃಖಿ ಭಕ್ತರಿಗೆ ತಾಮ್ರದ ತಗಡಿನಲ್ಲಿ ಒಂದು `ಅಂತ್ರ’ ಬರೆದುಕೊಡುತ್ತಾರೆ. ಈ ಬಗ್ಗೆ ವೈಚಾರಿಕರು ಕೇಳಿದ ಪ್ರಶ್ನೆಗೂ ಸ್ವಾಮೀಜಿ ಒಂದು ಬಾರಿ ಉತ್ತರ ಕೊಟ್ರಂತೆ. ಇದು ಭಕ್ತರ ನಂಬಿಕೆ. ನೊಂದವರಿಗೆ ಇದ್ರಿಂದ ಒಂದಿಷ್ಟು ನೆಮ್ಮದಿ ಸಿಗುತ್ತೆ. ಶ್ರದ್ಧೆ ಧಾರ್ಮಿಕ ನಂಬಿಕೆಯನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಲು ಬರುವುದಿಲ್ಲ. ಅದು ಭೌತವಸ್ತ್ರವಲ್ಲ ಭಾವ ಸಂಪತ್ತು ಅಂದ್ರಂತೆ.
ದುಃಖಗೊಂಡ ವ್ಯಕ್ತಿಗೆ ಸಿದ್ದಗಂಗಾ ಶ್ರೀಗಳು ಕೈಯಾರೆ ಕೊಡುವ ಈ `ಅಂತ್ರ’ ಮನಸ್ಸಿನ ಸಂಕಟವನ್ನು ಹಗುರಗೊಳಿಸುತ್ತದೆ. ಜನಮಾನಸದಲ್ಲಿ ಭಕ್ತಿ ಭಾವವನ್ನು ನೆಲೆಗೊಳಿಸಿರುವ ಈ ಕ್ಷೇತ್ರದಲ್ಲಿ ಭಕ್ತರಿಗೆ ಶ್ರೀಗಳ ದರ್ಶನದ ಜೊತೆಗೆ ಸಿದ್ದಗಂಗಾ ಬೆಟ್ಟದ ಮೇಲಿರುವ ಸಿದ್ಧಲಿಂಗೇಶ್ವರ ಮತ್ತು ಕ್ಷೇತ್ರಮಾತೆ ಸಿದ್ದಗಂಗಾ ಜಲಕುಂಡಕ್ಕೆ ಪೂಜೆ ಸಲ್ಲಿಸುವುದು ಕೂಡ ಪುಣ್ಯದ ಭಾವನೆ ನೀಡುತ್ತದೆ.
ಸಿದ್ದಗಂಗಾ ಕ್ಷೇತ್ರದಲ್ಲಿ ಹಿರಿಯ ಗುರುಗಳ ಗದ್ದುಗೆಗೆ ನಡೆಯುವ ನಿತ್ಯಪೂಜೆಗಳಲ್ಲದೇ ನಿಯತಕಾಲಿಕವಾಗಿ ವಿಶೇಷ ಪುಣ್ಯರಾಧನೆ ಮೊದಲಾದ ಧಾರ್ಮಿಕ ಸೇವೆ ನಡೆಯುತ್ತದೆ. ಶ್ರೀ ಕ್ಷೇತ್ರದ ದೇವರು, ಗುಡಿ, ಗದ್ದುಗೆ, ಜಲಕುಂಡ, ಎಲ್ಲವೂ ಶ್ರೀಗಳಷ್ಟೇ ಭಕ್ತರ ಪಾಲಿಗೆ ಪವಿತ್ರ. ಶ್ರೀಗಳ ಮೇಲೆ, ಕ್ಷೇತ್ರದ ಮೇಲೆ ಭಕ್ತಸಮೂಹ ಇಟ್ಟಿರುವ ಪ್ರೀತಿ ನಂಬಿಕೆಯನ್ನು ಅಳೆಯಲು ಸಾಧ್ಯವೇ ಇಲ್ಲ ಬಿಡಿ.
https://www.youtube.com/watch?v=jtctwPaRF7o
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv