ತುಮಕೂರು: ಸಿದ್ದಗಂಗಾ ಮಠದ ಲಿಂಗೈಕ್ಯ ಜಗದ್ಗುರು ಡಾ.ಶಿವಕುಮಾರ ಶ್ರೀಗಳ 112 ನೇ ಜಯಂತೋತ್ಸವ ಇಂದು ನಡೆಯಲಿದೆ.
ಶ್ರೀಗಳ ಜಯಂತಿಯ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಬೆಳಗ್ಗೆಯಿಂದಲೇ ಗದ್ದುಗೆ ಪೂಜೆ ಸೇರಿದಂತೆ ನಾನಾ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ. 11 ಗಂಟೆಯ ಬಳಿಕ ವೇದಿಕೆ ಕಾರ್ಯಕ್ರಮ ನಡೆಯುಲಿದ್ದು, ಮೈಸೂರು ಮಹಾರಾಜ ಯದುವೀರ್ ಸೇರಿದಂತೆ ಹಲವು ಗಣ್ಯರು, ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ.
Advertisement
Advertisement
ಸ್ವಾಮೀಜಿಯಾಗಿದ್ದು ಹೇಗೆ?:
ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಬಾಲ್ಯದ ಹೆಸರು ಶಿವಣ್ಣ. 1922ರಲ್ಲಿ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತ ಶಿವಣ್ಣ 1926ರಲ್ಲಿ ಮೆಟ್ರಿಕ್ಯುಲೇಷನ್ ತೇರ್ಗಡೆಯಾದರು. 1927ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳ ಜೊತೆ ಶಿವಣ್ಣ ಅವರ ಒಡನಾಟ ಹೆಚ್ಚಾಯಿತು. ಈ ವರ್ಷವೇ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಕಾಲೇಜು ಸೇರಿದರೂ ಶ್ರೀಗಳ ಜೊತೆಗಿನ ಸಂಬಂಧ ಹಾಗೆಯೇ ಮುಂದುವರಿದಿತ್ತು.
Advertisement
Advertisement
1941ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾಗುತ್ತಾರೆ. ಈ ವೇಳೆ ಅಂತ್ಯಸಂಸ್ಕಾರ ಕಾರ್ಯಕ್ರಮಕ್ಕೆ ಆಗಮಿಸಿದ ಶಿವಣ್ಣ ಅವರ ಮೇಲೆ ಶ್ರೀಗಳ ಗಮನ ಹೋಗುತ್ತದೆ. ಶಿವಣ್ಣನ ಹಿನ್ನೆಲೆಯನ್ನು ಚೆನ್ನಾಗಿ ಅರಿತ ಕಾರಣ ಉದ್ದಾನ ಶ್ರೀಗಳು ಯಾರ ಜೊತೆಯೂ ನಿರ್ಧಾರ ತೆಗೆದುಕೊಳ್ಳದೇ ಎಲ್ಲರ ಮುಂದೆ ನನ್ನ ಮುಂದಿನ ಉತ್ತರಾಧಿಕಾರಿ ಶಿವಣ್ಣ ಎಂದು ಘೋಷಿಸಿ ಬಿಡುತ್ತಾರೆ. ಹೀಗೆ ಎಲ್ಲರಂತೆ ಸಾಮಾನ್ಯರಾಗಿ ಅಂತ್ಯಸಂಸ್ಕಾರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿವಣ್ಣನವರು ಮರಳಿ ಹೋಗುವಾಗ ಕಾವಿ, ರುದ್ರಾಕ್ಷಿಗಳನ್ನು ಧರಿಸಿ `ಶ್ರೀ ಶಿವಕುಮಾರ ಸ್ವಾಮೀಜಿ’ಯಾಗಿ ಮರಳುತ್ತಾರೆ.