ತುಮಕೂರು: ಬೆಂಗಳೂರಿನ ಕೆಂಗೇರಿಯಲ್ಲಿರೋ ಬಿಜಿಎಸ್ ಆಸ್ಪತ್ರೆಯಿಂದ ಗುರುವಾರ ಡಿಸ್ಚಾರ್ಜ್ ಆದ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
ಎಂದಿನಂತೆ ಹಳೇ ಮಠದ ಕೊಠಡಿಯಲ್ಲಿ ಶ್ರೀಗಳು ವಿಶ್ರಾಂತಿ ಪಡೆಯುತ್ತಿದ್ದಾರೆ. ನಸುಕಿನ ಜಾವವೇ ಎದ್ದಿರುವ ಶ್ರೀಗಳು, ಇಷ್ಟಲಿಂಗ ಪೂಜೆಯಲ್ಲಿ ನಿರತರಾಗಿದ್ದಾರೆ.
ಇನ್ನು ಮೂರ್ನಾಲ್ಕು ದಿನ ಶ್ರೀಮಠದಲ್ಲೇ ನಡೆದಾಡುವ ದೇವರಿಗೆ ಚಿಕಿತ್ಸೆ ಮುಂದುವರೆಸಲಾಗುತ್ತದೆ. ಶ್ರೀಗಳ ವಿಶ್ರಾಂತಿ ಕೊಠಡಿಯಲ್ಲಿ ಎಲ್ಲಾ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ನಾಲ್ಕು ವೈದ್ಯರ ತಂಡ ಶ್ರೀಗಳ ಆರೋಗ್ಯದ ಬಗ್ಗೆ ನಿಗಾವಹಿಸಲಿದ್ದಾರೆ. ಹೀಗಾಗಿ ಒಂದು ವಾರಗಳ ಕಾಲ ಶ್ರೀಗಳ ದರ್ಶನ ಲಭ್ಯವಿರುವುದಿಲ್ಲ. ಭಕ್ತರು ಸಹಕರಿಸಬೇಕಾಗಿ ವೈದ್ಯರು ಮನವಿ ಮಾಡಿದ್ದಾರೆ.
ಪಿತ್ತಕೋಶಕ್ಕೆ ಸ್ಟಂಟ್ ಅಳವಡಿಸಿ ಆರು ತಿಂಗಳು ಕಳೆದ ಹಿನ್ನೆಲೆಯಲ್ಲಿ ಶತಾಯುಷಿ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು, ಜನರಲ್ ಚೆಕ್ ಅಪ್ ಗಾಗಿ ಬಿಜಿಎಸ್ ಆಸ್ಪತ್ರೆಗೆ ನಿನ್ನೆ ಆಗಮಿಸಿದ್ದರು. ಮುಂಜಾನೆ ಆಗಮಿಸಿದ ಶ್ರೀಗಳು ಕಾರಿನಿಂದ ಇಳಿದು ವ್ಹೀಲ್ ಚೇರ್ ನಂತಹ ಸೌಲಭ್ಯ ನಿರಾಕರಿಸಿ ನಡೆದುಕೊಂಡೇ ಆಸ್ಪತ್ರೆ ಒಳಗೆ ಹೋಗಿದ್ದರು.
ಜನವರಿ 27 ರಂದು ಬಿಜಿಎಸ್‍ಗೆ ದಾಖಲಾಗಿದ್ದ ಶ್ರೀಗಳಿಗೆ ಮೂರು ಸ್ಟಂಟ್ ಅಳವಡಿಸಲಾಗಿತ್ತು. ಅದಕ್ಕೂ ಮುನ್ನ 5 ಸ್ಟಂಟ್ ಸೇರಿ ಒಟ್ಟು 8 ಸ್ಟಂಟ್ ಅಳವಡಿಸಲಾಗಿದೆ. ಸ್ಟಂಟ್ ಅಳವಡಿಸಿದ ಆರು ತಿಂಗಳಾದ ಕಾರಣ ಜನರಲ್ ಚೆಕ್ ಅಪ್ ಗಾಗಿ ಶ್ರೀಗಳು ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಿದ್ದು, ಡಾ. ರವೀಂದ್ರ ನೇತೃತ್ವದಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ್ದರು.