ಚಾಮರಾಜನಗರ: ಮಠಕ್ಕೆ ಕಳುಹಿಸಿದ್ದ ವಿದ್ಯುತ್ ಬಿಲ್‌ನ್ನು ವಾಪಸ್ ತೆಗೆದುಕೊಂಡಿರುವುದು ಸಂತೋಷ ಎಂದು ತುಮಕೂರಿನ ಸಿದ್ದಗಂಗಾ ಶ್ರೀಗಳು (Siddaganga Mutt Seer) ಹೇಳಿದರು.
ಚಾಮರಾಜನಗರದಲ್ಲಿ (Chamarajanagara) ಹರವೆ ವಿರಕ್ತ ಮಠದ ಶಾಖಾ ಮಠ ಉದ್ಘಾಟನೆಗೆ ಬಂದಿದ್ದ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕೆಐಎಡಿಬಿ ಇಂದ ಕೆರೆಗೆ ನೀರು ತುಂಬಿಸಿದ್ದರು. ಅವರು ಕೆರೆಯಿಂದ ನೀರನ್ನು ಎಲ್ಲಿಗೂ ಬಿಟ್ಟಿಲ್ಲ. ಆದರೆ, ವಿದ್ಯುತ್ ಬಿಲ್‌ನ್ನು ಮಠಕ್ಕೆ ಕೊಟ್ಟಿದ್ದರು. ಸಮಸ್ಯೆ ಪರಿಹಾರಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಸಮಸ್ಯೆ ಪರಿಹರಿಸಿರುವುದು ಸಂತೋಷ ಎಂದು 70 ಲಕ್ಷ ರೂ. ವಿದ್ಯುತ್ ಬಿಲ್ ಮನ್ನಾಗೆ ಸಿದ್ದಗಂಗಾ ಶ್ರೀ ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸರ್ಕಾರದ ಯೋಜನೆಗೆ ಸಿದ್ಧಗಂಗಾ ಮಠಕ್ಕೆ `ಕರೆಂಟ್’ ಶಾಕ್ – 70 ಲಕ್ಷ ವಿದ್ಯುತ್ ಬಿಲ್ ಕಟ್ಟುವಂತೆ KIADB ಪತ್ರ
ನಾಡಿನ ಅಗ್ರಮಾನ್ಯ ಮಠಗಳಲ್ಲಿ ಒಂದಾಗಿರುವ ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ 70 ಲಕ್ಷ ರೂ. ವಿದ್ಯುತ್ ಬಿಲ್ ಕಳುಹಿಸಲಾಗಿತ್ತು. ಕೆಐಎಡಿಬಿಯು ಸಿದ್ದಗಂಗಾ ಮಠಕ್ಕೆ ಬರೋಬ್ಬರಿ 70 ಲಕ್ಷ ರೂ. ವಿದ್ಯುತ್ ಬಿಲ್ ಕಟ್ಟುವಂತೆ ಪತ್ರ ಬರೆದಿರುವುದು ಅಚ್ಚರಿ ಹುಟ್ಟು ಹಾಕಿತ್ತು.
ಹೊನ್ನೆನಹಳ್ಳಿಯಿಂದ ದೇವರಾಯ ಪಟ್ಟಣ ಕೆರೆಗೆ ಪೈಪ್‌ಲೈನ್ ಮೂಲಕ ಕೆಐಡಿಬಿಯು ನೀರು ಹರಿಸಿತ್ತು. ಈ ಯೋಜನೆಯಿಂದ ಸಿದ್ದಗಂಗಾ ಮಠ ಸೇರಿದಂತೆ ದೇವರಾಯಪಟ್ಟಣ, ಮಾದನಾಯಕನಪಾಳ್ಯ, ಕುಂದೂರು ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಉದ್ದೇಶ ಹೊಂದಿದೆ. ಇದನ್ನೂ ಓದಿ: PUBLiC TV Impact; 70 ಲಕ್ಷ ಕರೆಂಟ್ ಬಿಲ್ ಕಟ್ಟುವಂತೆ ಸಿದ್ದಗಂಗಾ ಮಠಕ್ಕೆ ನೀಡಿದ್ದ ನೋಟಿಸ್ ಹಿಂಪಡೆದ ಸರ್ಕಾರ
ಈಗ ಪ್ರಾಯೋಗಿಕವಾಗಿ ಅಷ್ಟೇ ನೀರು ತುಂಬಿಸಲಾಗಿದೆ. ಇನ್ನು ಮಠಕ್ಕೆ, ಅಕ್ಕಪಕ್ಕದ ಹಳ್ಳಿಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಆದರೂ, ಕೆರೆಗೆ ಪ್ರಾಯೋಗಿಕವಾಗಿ ನೀರು ತುಂಬಿಸಿದ ವಿದ್ಯುತ್ ಬಿಲ್‌ನ್ನು ಭರಿಸುವಂತೆ ಸಿದ್ದಗಂಗಾ ಮಠಕ್ಕೆ ಕೆಐಎಡಿಬಿ ಪತ್ರ ಬರೆದಿತ್ತು. ಇದು ಚರ್ಚೆಗೆ ಕಾರಣವಾಗಿತ್ತು. ಮಾಹಿತಿ ಅರಿತ ಸಚಿವ ಎಂ.ಬಿ.ಪಾಟೀಲ್, ಬಿಲ್ ಮನ್ನಾ ಮಾಡಲಾಗುವುದು. ಮಠಕ್ಕೆ ಪತ್ರ ಬರೆದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.