‘ರಾಜ್ಯವನ್ನು ಸಂಪೂರ್ಣ ಶಟ್ ಡೌನ್ ಮಾಡಿ’- ಸಿಎಂಗೆ ವೈದ್ಯರ ಸಲಹೆ

Public TV
2 Min Read
cm doctors meeting

– ಕೊರೊನಾ ಸಂಬಂಧ ವೈದ್ಯರ ಜೊತೆ ಸಿಎಂ ಸಭೆ
– ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ನಿಗಾ ಇಡುವುದೇ ಸಮಸ್ಯೆ

ಬೆಂಗಳೂರು: ಕೊರೊನಾ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಸಿಎಂ ಯಡಿಯೂರಪ್ಪ ಅವರು ಖಾಸಗಿ ಆಸ್ಪತ್ರೆ ವೈದ್ಯರೊಂದಿಗೆ ಸಭೆ ನಡೆಸಿದ್ದಾರೆ.

ಕೋವಿಡ್ 19 ಅನ್ನು ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸುವಂತೆ ಖಾಸಗಿ ಆಸ್ಪತ್ರೆಗಳು, ತಜ್ಞ ವೈದ್ಯರು ಹಾಗೂ ಪರಿಣತರನ್ನು ಸಿಎಂ ಮನವಿ ಮಾಡಿದರು. ಈ ವೇಳೆ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ದೊಡ್ಡ ಸಂಖ್ಯೆಯ ಜನರನ್ನು ಕ್ವಾರಂಟೈನ್‍ನಲ್ಲಿ ಇಡುವುದೇ ದೊಡ್ಡ ಸವಾಲು. ಹೀಗಾಗಿ ಸಂಪೂರ್ಣ ಶಟ್ ಡೌನ್ ಮಾಡುವುದೇ ಪರಿಹಾರ ಎಂದು ವೈದ್ಯರು ಸಲಹೆ ನೀಡಿದ್ದಾರೆ.

cm doctors meeting 1

ಇದೇ ವೇಳೆ ವೈದ್ಯರು, ಫಿವರ್ ಕ್ಲಿನಿಕ್‍ಗಳನ್ನು ಸ್ಥಾಪಿಸಿ, ಪ್ರಾಥಮಿಕ ಪರೀಕ್ಷೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ 30 ಫಿವರ್ ಕ್ಲಿನಿಕ್‍ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಖಾಸಗಿ ಆಸ್ಪತ್ರೆಯವರು ಶೇ. 50ರಷ್ಟು ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಒದಗಿಸುವ ಭರವಸೆ ನೀಡಿದ್ದಾರೆ. 100ಕ್ಕೂ ಹೆಚ್ಚು ವೆಂಟಿಲೇಟರ್‍ಗಳನ್ನು ಒದಗಿಸಲು ಮುಂದೆ ಬಂದಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1200 ಹಾಸಿಗೆಗಳ ಪ್ರತ್ಯೇಕ ಬ್ಲಾಕ್ ಗುರುತಿಸುವ ಜೊತೆಗೆ ಖಾಸಗಿ ಆಸ್ಪತ್ರೆಯೊಂದನ್ನು ಸಹ ಗುರುತಿಸಲು ಸಹಕರಿಸುವುದಾಗಿ ತಿಳಿಸಿದ್ದಾರೆ.

curfew 1 1

ಜನರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು “ಮನೆಯಲ್ಲೇ ಇದ್ದು, ಸೋಂಕು ಮುಕ್ತರಾಗಿರಿ” ಎಂಬ ಘೋಷವಾಕ್ಯವನ್ನು ಪಾಲಿಸಬೇಕಾಗಿದೆ. ಕೊರೊನಾ ತಡೆಯಲು, ಸರ್ಕಾರ-ಖಾಸಗಿ ಸಹಭಾಗಿತ್ವವನ್ನು ಬಲಪಡಿಸಲು ತೀರ್ಮಾನಿಸಲಾಯಿತು. ಸರ್ಕಾರ ಕೊರೊನಾ ತಡೆಯುವುದರೊಂದಿಗೆ ಸೋಂಕಿತರ ಚಿಕಿತ್ಸೆಗೂ ಪೂರ್ವ ಸಿದ್ಧತೆ ನಡೆಸುತ್ತಿದೆ. ಸರ್ಕಾರವು ಜನರಿಗೆ ಈ ಸೋಂಕಿನ ಗಂಭೀರತೆಯನ್ನು ಅರಿವು ಮೂಡಿಸಲು ತೀರ್ಮಾನಿಸಿದೆ. ನಗರ ಪ್ರದೇಶದಲ್ಲಿ ವಾಸವಾಗಿರುವ ಜನರು ದಯವಿಟ್ಟು ಇನ್ನೂ ಕೊರೊನಾ ಸೋಂಕು ಮುಕ್ತವಾಗಿರುವ ಹಳ್ಳಿಗಳಿಗೆ ತೆರಳಬಾರದು. ಕೊರೊನಾ ಹರಡುವುದನ್ನು ತಡೆಯಲು ಸಹಕರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.

curfew 1 2

ಸಭೆಯ ತೀರ್ಮಾನಗಳು
1. ರಾಜ್ಯಾದ್ಯಂತ ಮಾರ್ಚ್ 31ರ ವರೆಗೆ ಮೊನ್ನೆ ತಿಳಿಸಿದ 9 ಜಿಲ್ಲೆಗಳಲ್ಲಿ ಸೆಕ್ಷನ್ 144ನ್ನು ಮುಂದುವರಿಸಲಾಗುವುದು. ಎಲ್ಲ ಅತ್ಯವಶ್ಯಕ ಸೇವೆಗಳನ್ನು ಹೊರತುಪಡಿಸಿ ಇತರ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.
2. ಸಾರಿಗೆ ಮತ್ತು ಗೃಹ ಇಲಾಖೆಯ ಸಭೆ ನಡೆಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಲಾಗಿದೆ. ಹೋಮ್ ಕ್ವಾರಂಟೈನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲು ತೀರ್ಮಾನ
3. ಜೀವನೋಪಾಯಕ್ಕೆ ದೈನಂದಿನ ಆದಾಯದ ಮೇಲೆ ಅವಲಂಬಿತರಾಗಿರುವ ಜನರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ಒದಗಿಸಲಾಗುವುದು.
4. ಬೆಂಗಳೂರು ಕರಗ ಉತ್ಸವ ನಡೆಸಲು ಅವಕಾಶ ಇಲ್ಲ. ದೇವಾಲಯ, ಪ್ರಾರ್ಥನಾಲಯಗಳಲ್ಲಿ ಗುಂಪು ಸೇರುವಂತಿಲ್ಲ.
5. ಟೆಲಿಕನ್ಸಲ್ಟೇಶನ್ ಗೆ ಅವಕಾಶ. ಚಿಕಿತ್ಸೆ – ಸಲಹೆಗೆ ಹೊರಬರುವ ಅಗತ್ಯ ಇಲ್ಲ.

Share This Article