ಮುಂಬೈ: ರೋಹಿತ್ ಶರ್ಮಾ (Rohit Sharma) ಬಳಿಕ ಮೂರು ಮಾದರಿಯ ಕ್ರಿಕೆಟ್‌ಗೆ ಟೀಂ ಇಂಡಿಯಾದ ಕ್ಯಾಪ್ಟನ್ ಯಾರಾಗ್ತಾರೆ ಅನ್ನೋ ಪ್ರಶ್ನೆಗೆ ಬಹುತೇಕ ಉತ್ತರ ಸಿಕ್ಕಂತೆ ಕಾಣುತ್ತಿದೆ. ರೋಹಿತ್ ನಿವೃತ್ತಿ ಬಳಿಕ 25 ವರ್ಷದ ಯುವ ಆಟಗಾರ ಶುಭಮನ್ ಗಿಲ್ (Shubman Gill) ಅವರನ್ನೇ ಎಲ್ಲಾ ಮಾದರಿಯ ನಾಯಕನನ್ನಾಗಿ ನೇಮಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (International Cricket) ರೋಹಿತ್, ವಿರಾಟ್ ಕೊಹ್ಲಿ ಅವರ ನಿವೃತ್ತಿಯ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ಸದ್ದು ಮಾಡುತ್ತಿವೆ. ಇದೇ ಅಕ್ಟೋಬರ್ 19ರಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿ (ODI Series) ಬಳಿಕ ಇಬ್ಬರು ದಿಗ್ಗಜರು ನಿವೃತ್ತಿ ಘೋಷಿಸುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ರೋಹಿತ್ ಬಳಿಕ ಆಲ್‌ಫಾರ್ಮ್ಯಾಟ್ (ಎಲ್ಲಾ ಮಾದರಿ)ಗೆ ಗಿಲ್ ಅವರನ್ನು ನಾಯಕನನ್ನಾಗಿ ನೇಮಿಸುವ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಸೆ.9ರಿಂದ ಶುರುವಾಗಲಿರುವ ಟಿ20 ಏಷ್ಯಾ ಕಪ್ ಟೂರ್ನಿ ಬಳಿಕ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.
ವರದಿಗಳ ಪ್ರಕಾರ, ಶುಭಮನ್ ಗಿಲ್ ಅವರನ್ನು ಏಕದಿನ ನಾಯಕನನ್ನಾಗಿ ನೇಮಿಸುವ ಬಗ್ಗೆ ಯಾವುದೇ ಸಂಶಯ ಇಲ್ಲ. ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಗೆ ಇನ್ನಷ್ಟು ಸಮಯ ಬೇಕಾಗುತ್ತದೆ ಎಂದು ಬಿಸಿಸಿಐ (BCCI) ಹೇಳಿದೆ. ರೋಹಿತ್ ಶರ್ಮಾ ಸದ್ಯ ಏಕದಿನ ಸ್ವರೂಪದಲ್ಲಿ ಮಾತ್ರ ಆಡುತ್ತಿದ್ದು, 2027ರ ಏಕದಿನ ವಿಶ್ವಕಪ್ ಗೆದ್ದು ತರುವ ಉತ್ಸಾಹದಲ್ಲಿದ್ದಾರೆ. ಆದ್ರೆ ಅಷ್ಟೊತ್ತಿಗೆ ಅವರ ವಯಸ್ಸು 40 ಸಮೀಪಿಸಲಿದೆ. ಹೀಗಾಗಿ ಆಯ್ಕೆ ಸಮಿತಿ ಅವರ ವಯೋಮಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಕೈಬಿಡುವ ನಿರ್ಧಾರದಲ್ಲಿದೆ. ಹೀಗಾಗಿ ಶುಭಮನ್ ಗಿಲ್ ಅವರನ್ನು ಆಸೀಸ್ ಸರಣಿ ಬಳಿಕ ಏಕದಿನ ನಾಯಕನನ್ನಾಗಿ ನೇಮಕ ಮಾಡುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.
ಎಲ್ಲಾ ಫಾರ್ಮ್ಯಾಟ್‌ಗೆ ಒಬ್ಬನೇ ನಾಯಕ?
ಸದ್ಯ ಬಿಸಿಸಿಐ ಆಯ್ಕೆ ಸಮಿತಿಯು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಒಬ್ಬನೇ ನಾಯಕನನ್ನ ಹುಡುಕುತ್ತಿದೆ. ಅದಕ್ಕಾಗಿ ಏಷ್ಯಾಕಪ್ ಬಳಿಕ 34 ವರ್ಷದ ಸೂರ್ಯಕುಮಾರ್ ಯಾದವ್ ಅವರನ್ನ ಟಿ20 ನಾಯಕತ್ವದಿಂದ ಬದಲಾಯಿಸುವ ಚಿಂತನೆಯಲ್ಲಿದೆ. ಅಕ್ಷರ್ ಪಟೇಲ್ ಅವರನ್ನು ಟಿ20I ಉಪನಾಯಕನ್ನಾಗಿ ನೇಮಿಸಲಾಗಿದೆ.
ಈಗಾಗಲೇ ಟೆಸ್ಟ್ ಕ್ಯಾಪ್ಟನ್ ಆಗಿ ಸೈ ಎನಿಸಿಕೊಂಡಿರುವ ಶುಭಮನ್ ಗಿಲ್ ಅಕ್ಟೋಬರ್ ಬಳಿಕ ಏಕದಿನ ನಾಯಕನೂ ಆಗಲಿದ್ದಾರೆ. ಜೊತೆಗೆ 2026ರ ಟಿ0 ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ಆದರೆ ಬಿಸಿಸಿಐ ಈ ಕುರಿತು ಎಲ್ಲಿಯೂ ಅಧಿಕೃತ ಹೇಳಿಕೆ ನೀಡಿಲ್ಲ.
ಆಸೀಸ್ ಸರಣಿ ಬಳಿಕ ರೋಹಿತ್- ಕೊಹ್ಲಿಗೆ ವಿದಾಯ?
ಇನ್ನೂ ಮುಂದಿನ ಅಕ್ಟೋಬರ್ 19ರಿಂದ ಅ.25ರ ವರೆಗೆ ಆಸ್ಟ್ರೇಲಿಯಾ ವಿರುದ್ಧ ಭಾರತ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿ ಬಳಿಕ ದಿಗ್ಗಜರಾದ ವಿರಾಟ್, ರೋಹಿತ್ ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಟೆಸ್ಟ್ ಮತ್ತು ಟಿ20 ಮಾದರಿಗಳಿಗೆ ವಿದಾಯ ಹೇಳಿರುವ ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ.