ಕನ್ನಡದ ಹಿರಿಯ ಸಿನಿಮಾ ನಿರ್ದೇಶಕ, ಉಲ್ಟಾ ಪಲ್ಟಾ ಖ್ಯಾತಿಯ ಎನ್.ಎಸ್. ಶಂಕರ್ ಇದೀಗ ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅದಕ್ಕೆ ‘ಈಗ’ ಎಂದು ಹೆಸರನ್ನೂ ಇಟ್ಟಿದ್ದಾರೆ. ಈ ಸಿನಿಮಾದಲ್ಲಿ ಶ್ರುತಿ ಹರಿಹರನ್ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಎನ್.ಎಸ್ ಶಂಕರ್ ಅವರೇ ಫೇಸ್ ಬುಕ್ ಖಾತೆಯಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದು, ಆ ಫೋಟೋಗಳಲ್ಲಿ ಶ್ರುತಿ ಹರಿಹರನ್, ಲಕ್ಷ್ಮೀ ಕಬ್ಬೇರಹಳ್ಳಿ ಸೇರಿದಂತೆ ಹಲವು ಕಲಾವಿದರು ಇದ್ದಾರೆ.
ಜೂನ್.13ರಿಂದ ಈ ಸಿನಿಮಾ ಸೆಟ್ಟೇರಲಿದ್ದು, ತಮ್ಮ ಸಿನಿಮಾ ಕೆಫೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎನ್.ಎಸ್.ಶಂಕರ್. ಇದು ಜನರೇ ಬಂಡವಾಳ ಹೂಡಿ ಮಾಡುತ್ತಿರುವ ಚಿತ್ರವಾಗಿದ್ದು, ಒಂದು ಲಕ್ಷದಿಂದ ಐದು ಲಕ್ಷದವರೆಗೂ ಜನರೇ ಹಣ ಹೂಡಿ ನಿರ್ಮಾಪಕರಾಗುವ ಅವಕಾಶವನ್ನೂ ಅವರು ನೀಡಿದ್ದಾರಂತೆ. ಹಾಗಾಗಿ ಕ್ರೌಡ್ ಫಂಡಿಂಗ್ ನಲ್ಲಿ ಮೂಡಿ ಬರುತ್ತಿರುವ ಕನ್ನಡದ ಎರಡನೇ ಸಿನಿಮಾ ಇದಾಗಲಿದೆ. ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ
ಸಿನಿಮಾದ ವಿಶೇಷ ಅಂದರೆ, ಮೂರು ಕಥೆಗಳನ್ನು ಒಂದಾಗಿಸಿಕೊಂಡು ಚಿತ್ರಕಥೆ ಬರೆಯಲಾಗಿದ್ದು ಪಿ.ಲಂಕೇಶ್ ಅವರ ಮುಟ್ಟಿಸಿಕೊಂಡವನು, ಪಿ.ಮಹಮ್ಮದ್ ಅವರ ಡಿಸೆಂಬರ್ 6 ಹಾಗೂ ಪ್ರತಿಭಾ ನಂದಕುಮಾರ್ ಬರೆದ ಅರುಂಧತಿ ಕಥೆಗಳನ್ನು ಈ ಚಿತ್ರಕ್ಕಾಗಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರಂತೆ. ಕಲಾವಿದರಿಗೆ ಚಿತ್ರಕಥೆ ಮತ್ತು ಪಾತ್ರಗಳ ಹಿನ್ನೆಲೆಯನ್ನು ಮನದಟ್ಟು ಮಾಡಿಸುವಲ್ಲಿ ನಿರ್ದೇಶಕರು ಸದ್ಯ ಬ್ಯುಸಿಯಾಗಿದ್ದು, ಜೂ.13ರ ನಂತರ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ.