ಬೆಂಗಳೂರು: ತುಮಕೂರಿನ ಸಿದ್ದಗಂಗಾ ಕ್ಷೇತ್ರ ಹಾಗೂ ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳ ಬಗ್ಗೆ ಅನೇಕರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಆಯ್ದ ಗಣ್ಯರ ಅನಿಸಿಕೆಗಳನ್ನು ಇಲ್ಲಿ ನೀಡುತ್ತಿದ್ದೇವೆ.
ಎಸ್ ನಿಜಲಿಂಗಪ್ಪ: ನಿಷ್ಠೆ, ಸೇವಾಕಾಂಕ್ಷೆ, ದೃಢ ನಿಶ್ಚಯ, ಅಡಚಣೆಗಳನ್ನು ಎದುರಿಸುವ ಧೈರ್ಯ, ಪವಿತ್ರತೆ, ವಿಶಾಲ ದೃಷ್ಟಿ, ಸತ್ಯ ಪ್ರೇಮ, ಮೇಲ್ಮಟ್ಟದ ಧ್ಯೇಯ ಇವೆಲ್ಲ ಸಿದ್ದಗಂಗಾ ಕ್ಷೇತ್ರದ ಶ್ರೀ ಶಿವಕುಮಾರ ಸ್ವಾಮಿಗಳಲ್ಲಿ ಕೇಂದ್ರೀಕೃತವಾಗಿವೆ. ಇದು ಸಮಾಜದ ರಾಷ್ಟ್ರದ ಸುದೈವ ಎಂದು ಮುಖ್ಯಮಂತ್ರಿಯಾಗಿದ್ದ ಎಸ್ ನಿಜಲಿಂಗಪ್ಪ ಅವರು 1966ರ ಫೆಬ್ರವರಿ 27ರಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.
Advertisement
Advertisement
ಡಿ. ದೇವರಾಜ ಅರಸು: ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ದೀನದಲಿತರ ಉದ್ಧಾರಕ್ಕಾಗಿ ನಾಡಿನ ಬಡತನ ನಿವಾರಣೆಗಾಗಿ ಲಕ್ಷಾಂತರ ಬಡ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಮಹಿಮಾಶಾಲಿಗಳು ಎಂದು ಮಾಜಿ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಬಣ್ಣಿಸಿದ್ದರು.
Advertisement
ಡಾ.ಕೆ.ಶಿವರಾಮ ಕಾರಂತ: ನಾಡಿನ ಮೂಲೆ ಮೂಲೆಗಳಿಂದ ಅನಾಥರನ್ನು ಬರಮಾಡಿಕೊಂಡು, ಅವರಿಗೆಲ್ಲ ಅನ್ನದಾನದ ಜತೆಯಲ್ಲಿ ಜ್ಞಾನವನ್ನೂ ದಾನ ಮಾಡುತ್ತಿರುವ ದೃಶ್ಯವಂತೂ ನನ್ನ ಪಾಲಿಗೆ ಅಸಾಮಾನ್ಯ ನೋಟವೆನಿಸಿದೆ. ಅಸಂಖ್ಯಾತ ಬಡಬಗ್ಗರ ಇಹದ ಅವಶ್ಯಕತೆಗಳನ್ನು ಪೂರೈಸುತ್ತಿರುವುದು ಮಾತ್ರವಲ್ಲದೇ ಅವರ ‘ಪರ’ವನ್ನು ಸಹ ಈ ತಾಯಿಗೆ ಋಣಿಯನ್ನಾಗಿ ಮಾಡುತ್ತಿರುವ ಕರ್ಮ ಭೂಮಿ ಇದಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಕೆ ಶಿವರಾಮ ಕಾರಂತರು ಬಣ್ಣಿಸಿದ್ದರು.
Advertisement
ಜೆ.ಎಚ್ ಪಟೇಲ್: ಅನ್ನದಾನ ವಿದ್ಯಾದಾನಗಳನ್ನು ಮಠ ಮಾನ್ಯಗಳು ನಿರತಂತರವಾಗಿ ನಡೆಸಿಕೊಂಡು ಬಂದಿರುವುದರಿಂದಲೇ ಸಮಾಜವಿನ್ನೂ ಅಧೋಗತಿಯತ್ತ ತಲುಪಿಲ್ಲ. ಇದಕ್ಕೆ ಉದಾಹರಣೆ ಶ್ರೀ ಸಿದ್ದಗಂಗಾ ಮಠದ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಾಮಾಜಿಕ ಸೇವೆಗೆ ತಮ್ಮನ್ನೇ ತಾವು ಅರ್ಪಣೆ ಮಾಡಿಕೊಂಡಿರುವ ಮಹಾ ದಾಸೋಹಿಗಳು. ಇಂತಹ ಕಾಯಕ ಯೋಗಿಗಳೂ ನಮ್ಮ ಕಣ್ಣ ಮುಂದೆ ಇರುವುದರಿಂದಲೇ ಸಮಾಜದಲ್ಲಿ ಮೌಲ್ಯಗಳು ಇನ್ನೂ ಜೀವಂತವಾಗಿಯೇ ಉಳಿದುಕೊಂಡಿವೆ. ಇದನ್ನು ಸರ್ವರೂ ಸ್ವಾಗತಿಸಿ ಬೆಂಬಲಿಸಿದಾಗ ಮಾತ್ರ ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್.ಪಟೇಲ್ 1997ರ ಮೇ ತಿಂಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ವೀರೇಂದ್ರ ಹೆಗ್ಗಡೆ: ಪೂಜ್ಯರಾದ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ಅಪರೂಪದ, ತ್ಯಾಗದ ಪ್ರತೀಕವಾದ ಒಂದು ಶಕ್ತಿಯಾಗಿದ್ದಾರೆ. ನಮ್ಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳವರು ನಮ್ಮ ಸಮಾಜಕ್ಕೆ ಆದರ್ಶವಾಗಿದ್ದಾರೆ. ಏಕೆಂದರೆ ಅವರು ತಮ್ಮ ದೇಹವನ್ನು ಶ್ರೀಗಂಧದ ಹಾಗೆ ಸವೆಸುತ್ತಾ ಬಂದಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅನಿಸಿಕೆ ವ್ಯಕ್ತಪಡಿಸಿದ್ದರು.
ಮಾಸ್ತಿ ವೆಂಕಟೇಶ್ ಅಯ್ಯಂಗಾರ್: ಶ್ರೀ ಶಿವಕುಮಾರ ಸ್ವಾಮಿಗಳು ಉನ್ನತ ತರದ ಸನ್ಯಾಸಿಗಳು. ತಮ್ಮ ಸೇವೆಯಿಂದ ಇವರು ಸನ್ಯಾಸಿಗಳ ಸಮುದಾಯಕ್ಕೆ ಒಂದು ಆದರ್ಶವಾಗಿದ್ದಾರೆ. ಒಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ ಎಂದು ಕವಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅಭಿಪ್ರಾಯಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv