ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ (Channarayapatna) ತಾಲ್ಲೂಕಿನ ನುಗ್ಗೇಹಳ್ಳಿ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗಿರುವ ಶ್ರೀಮದ್ ರಾಮಾನುಜಾ ಗೋಶಾಲೆಯಲ್ಲಿ ಶ್ರೀ ಅಭಯ ಆಂಜನೇಯ ಸ್ವಾಮಿಯ ಪ್ರತಿಷ್ಠಾಪನ ಮಹೋತ್ಸವವು `ಪಬ್ಲಿಕ್ ಟಿವಿ’ಯಲ್ಲಿ ಪ್ರಸಾರವಾಗುವ ರಾಶಿ ಭವಿಷ್ಯ ಖ್ಯಾತಿಯ ಡಾ. ಶ್ರೀಧರ ಭಟ್ಟಚಾರ್ಯ ಗುರೂಜಿ (Sridhara Bhattacharya Guruji) ಅವರ ನೇತೃತ್ವದಲ್ಲಿ ನೆರವೇರಿತು.
ಶ್ರೀ ಅಭಯ ಆಂಜನೇಯ ಸ್ವಾಮಿಯ ಪ್ರತಿಷ್ಠಾಪನ ಮಹೋತ್ಸವವು ಎರಡು ದಿನಗಳ ಕಾಲ ನೆರವೇರಿದ್ದು, ಗೋಶಾಲಾ ಸಂಸ್ಥಾಪಕರು ಹಾಗೂ `ಪಬ್ಲಿಕ್ ಟಿವಿ’ಯಲ್ಲಿ ಪ್ರಸಾರವಾಗುವ ರಾಶಿ ಭವಿಷ್ಯ ಖ್ಯಾತಿಯ ಡಾ. ಶ್ರೀಧರ ಭಟ್ಟಚಾರ್ಯ ಗುರೂಜಿ ಅವರ ನೇತೃತ್ವದಲ್ಲಿ ಅತ್ಯಂತ ಭಕ್ತಿಭಾವದಿಂದ ನೆರವೇರಿದೆ.
ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮದ ಹೊರವಲಯದಲ್ಲಿ ನೂತನವಾಗಿ ನಿರ್ಮಿಸಿರುವ ಹದಿನೆಂಟು ಅಡಿ ಉದ್ದದ ಅಭಯ ಆಂಜನೇಯ ಸ್ವಾಮಿಯ ಪ್ರತಿಷ್ಠಾಪನಾ ಕಾರ್ಯಕ್ರಮ ಜರುಗಿತು. ಖ್ಯಾತ ಜ್ಯೋತಿಷಿ ಡಾ. ಶ್ರೀಧರ ಭಟ್ಟಚಾರ್ಯ ಗುರೂಜಿ ಪ್ರತಿಷ್ಟಾಪನಾ ಕಾರ್ಯವನ್ನು ನೆರವೇರಿಸಿದರು. ಕಳೆದ 2 ದಿನಗಳಿಂದ ಅದ್ದೂರಿಯಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಇನ್ನು ಭಾನುವಾರದಂದು (ನ.17) ಸಂಜೆ 6 ಗಂಟೆಗೆ ಗೋಧೂಳಿ ಲಗ್ನದಲ್ಲಿ ದೀಪ ಬೆಳಗಿಸುವ ಮೂಲಕ ಧ್ವಜಾರೋಹಣ, ಯಾಗಶಾಲಾ ಪ್ರವೇಶ, ಸಪ್ತವಾಸದಿ ಹೋಮಗಳು, ಪೂರ್ಣಾಹುತಿ ನಂತರ ಮಂಗಳಾರತಿ ನಡೆಯಿತು. ಜೊತೆಗೆ ಸುಪ್ರಭಾತ, ಪುಣ್ಯಾಹ ಸೇರಿದಂತೆ ಮಹಾ ಕುಂಭಾಭಿಷೇಕ ನಂತರ ಮಹಾಮಂಗಳಾರತಿಯೂ ಜರುಗಿತು.
ಮಹೋತ್ಸವದಲ್ಲಿ ಯತಿರಾಜ ಮಠದ ಶ್ರೀ ಯದುಗಿರಿ ಯತಿರಾಜಾ ನಾರಾಯಣ, ರಾಮಾನುಜಾ ಜೀಯರ್ ಸ್ವಾಮಿಗಳು, ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಸೇರಿ ವಿವಿಧ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಯತಿರಾಜಾ ನಾರಾಯಣ ಸ್ವಾಮೀಜಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದ್ದು, ಲಕ್ಷಾಂತರ ಮಂದಿ ಅಲ್ಲಿಗೆ ಹೋಗಿ ರಾಮಲಲ್ಲಾನನ್ನು ದರ್ಶನ ಮಾಡಿಕೊಂಡು ಬರುತ್ತಿದ್ದಾರೆ. ಈಗ ರಾಮಮಂದಿರ ಅನುಭವದಿಂದ ಕರ್ನಾಟಕದಲ್ಲಿ ಎಲ್ಲಾ ಕಡೆ ರಾಮಮಂದಿರಗಳು ನಿರ್ಮಾಣವಾಗಿ ಆಂಜನೇಯಸ್ವಾಮಿಯಾಗಿ ನಿಂತು ನಮ್ಮೆಲ್ಲರಿಗೂ ಅನುಗ್ರಹ ನೀಡುತ್ತಿದ್ದಾರೆ. ಅಭಯ ಆಂಜನೇಯ ಸ್ವಾಮಿಯ ಪ್ರತಿಷ್ಠಾಪನೆ ಮಾಡಿರುವುದರಿಂದ ಎಲ್ಲರಿಗೂ ಒಳಿತಾಗಲಿ ಎಂದರು.
ಎರಡು ದಿನಗಳ ಕಾಲ ಜರುಗಿದ ಶ್ರೀ ಅಭಯ ಆಂಜನೇಯ ಸ್ವಾಮಿ ಪ್ರತಿಷ್ಠಾಪನ ಮಹೋತ್ಸವದಲ್ಲಿ ನೂರಾರು ಮಂದಿ ಭಾಗಿಯಾಗಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ಎಲ್ಲಾ ಭಕ್ತರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಶ್ರೀ ವೈ.ಶ್ರೀಧರಭಟ್ಟಾಚಾರ್ಯ ಗುರೂಜಿಯವರ ಧಾರ್ಮಿಕ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.