ಹಾಸನ: ಕೇಂದ್ರ ಬಜೆಟ್‍ನಲ್ಲಿ ಹಾಸನ (Hassan) ಅಲ್ಲ, ಕರ್ನಾಟಕವೇ ಇರಲಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ (H.D Revanna) ಸಂಸದ ಶ್ರೇಯಸ್ ಪಟೇಲ್ (Shreyas Patel) ಟಾಂಗ್ ಕೊಟ್ಟಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ನಾನೊಬ್ಬ ಜನಪ್ರತಿನಿಧಿಯಾಗಿದ್ದೇನೆ. ನನಗೆ ಕೇಂದ್ರ ಬಜೆಟ್ ಪುಸ್ತಕ ಕೊಡ್ತಾರೆ. ನನಗಿಂತ ಗೊತ್ತಾ ಅವರಿಗೆ? ಕೆಂದ್ರ ಬಜೆಟ್ ಪುಸ್ತಕದಲ್ಲಿ ಎಷ್ಟೋ ರಾಜ್ಯಗಳ ಹೆಸರಿಲ್ಲ. ಇನ್ನೂ ಹಾಸನದ ಹೆಸರು ಇರುತ್ತಾ? ರಾಜ್ಯ ಬಜೆಟ್‍ನಲ್ಲಿ ಹಾಸನ ಜಿಲ್ಲೆಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಸುಮ್ಮನೆ ಇಲ್ಲಸಲ್ಲದ ಹೇಳಿಕೆ ನೀಡಬಾರದು ಎಂದಿದ್ದಾರೆ. ಇದನ್ನೂ ಓದಿ: ಹಾಸನಕ್ಕೆ ಬಜೆಟ್‌ನಲ್ಲಿ ಜೂಜು, ಎಣ್ಣೆ, ಮಟ್ಕಾ, ಗಾಂಜಾ ಗ್ಯಾರಂಟಿ: ರೇವಣ್ಣ ವ್ಯಂಗ್ಯ
ಇನ್ನೂ ಪೊಲೀಸರು ಕುಡಿದು ಕರ್ತವ್ಯಕ್ಕೆ ಬರುತ್ತಾರೆ ಎಂಬ ರೇವಣ್ಣ ಅವರ ಆರೋಪಕ್ಕೆ, ಗಲಾಟೆಯಾದ ಸಂದರ್ಭದಲ್ಲಿ ಪೊಲೀಸರು ನಿಭಾಯಿಸುತ್ತಾರೆ. ಪೊಲೀಸರ ಮೇಲೆ ಇಲ್ಲಸಲ್ಲದ ಆರೋಪ ಮಾಡಬಾರದು. ಎಣ್ಣೆ ಕುಡಿದು ಬಂದು ಡ್ಯೂಟಿ ಮಾಡಿದ್ರೆ ಸಾಕ್ಷಿ, ಪುರಾವೆಗಳಿದ್ದರೆ ಕೊಡಲಿ. ಇವರ ಕಾಲದಲ್ಲಿ ಏನೇನು ಆಗಿದೆ ಎಂದು ಗೊತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯಕ್ಕೆ ಇವರ ಕಾಲದಲ್ಲಿ ಯಾವ ಗ್ಯಾರೆಂಟಿ ಕೊಟ್ಟಿದ್ದಾರೆ? ನಾವು ಕೆಲಸ ಮಾಡುತ್ತಿದ್ದೇವೆ, ಮುಂದೆ ಸಹ ಮಾಡಿ ತೋರಿಸುತ್ತೇವೆ. ಅವರು ಹಿರಿಯರಿದ್ದಾರೆ ಅಭಿವೃದ್ಧಿಗೆ ಕೈ ಜೋಡಿಸಲಿ, ಸಲಹೆ ನೀಡಲಿ, ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡೋಣ. ಹಾಸನ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸಲಹೆ, ಸಹಕಾರ ನೀಡಲಿ ಎಂದು ತಿರುಗೇಟು ಕೊಟ್ಟಿದ್ದಾರೆ.
ನಾಲ್ಕೈದು ತಿಂಗಳಿನಲ್ಲಿ ಸರ್ಕಾರ ಬೀಳುತ್ತೆ ಎಂಬ ಎಂಎಲ್‍ಸಿ ಸೂರಜ್ ರೇವಣ್ಣ ಹೇಳಿಕೆ ವಿಚಾರವಾಗಿ, ತಿಳಿದವರಿಗೆ, ಬುದ್ದಿವಂತರಿಗೆ ಏನಾದರೂ ಉತ್ತರ ಕೊಡಬಹುದು. ಅವರು ಯಾವ ಮಾನದಂಡದ ಮೇಲೆ ಹಾಗೆ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ನಮ್ಮ ಸರ್ಕಾರ ಅಸ್ಥಿರವಾಗಿದೆಯೇ? 140 ಜನ ಶಾಸಕರಿದ್ದಾರೆ. ಇಡೀ ರಾಜ್ಯದ ಜನ ಕಾಂಗ್ರೆಸ್‍ಗೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸೋಮವಾರ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಬಜೆಟ್ ಪುಸ್ತಕದಲ್ಲಿ ನಮ್ಮ ಜಿಲ್ಲೆಯ ಹೆಸರೇ ಇರಲಿಲ್ಲ, ಆದರೂ ನಮ್ಮ ಜಿಲ್ಲೆಗೆ ಹೆಚ್ಚುವರಿಯಾಗಿ ಜೂಜು, ಎಣ್ಣೆ, ಮಟ್ಕಾ, ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: Hassan| ಅತ್ತೆ-ಸೊಸೆ ಜಗಳ; ಕೆರೆಗೆ ಹಾರಿ ತಾಯಿ, ಮಗ ಆತ್ಮಹತ್ಯೆ