ಕನ್ನಡ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದುಕೊಂಡ ನಟಿಯರು ಪರಭಾಷೆಗಳಿಗೆ ಹೋದ ಸುದ್ದಿಗಳು ಆಗಾಗ ಹೊರ ಬೀಳುತ್ತಲೇ ಇರುತ್ತವೆ. ಆದರೆ ಹಾಗೆ ಬೇರೆ ಭಾಷೆಗಳಿಗೆ ಹೋಗಿ ನೆಲೆ ನಿಂತು ಆ ಮೂಲಕವೇ ಸುದ್ದಿ ಮಾಡುವವರು ಕೊಂಚ ವಿರಳ. ಇದೀಗ ಕನ್ನಡದಲ್ಲಿ ಪ್ರತಿಭಾವಂತ ನಟಿಯಾಗಿ ಹೆಸರು ಮಾಡಿರೋ ಶ್ರದ್ಧಾ ಶ್ರೀನಾಥ್ ಆ ವಿರಳರ ಸಾಲಿಗೆ ಸೇರಿಕೊಂಡಂಥಾ ಸುದ್ದಿಯೊಂದು ಹರಿದಾಡಲು ಶುರುವಿಟ್ಟಿದೆ!
ಶ್ರದ್ಧಾ ಶ್ರೀನಾಥ್ ಇದೀಗ ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದಾರೆ. ಶ್ರದ್ಧಾ ನಾಯಕಿಯಾಗಿ ಅಭಿನಯಿಸಿದ್ದ ಜೆರ್ಸಿ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರಲ್ಲಿನ ಪಾತ್ರ, ನಟನೆ ಕಂಡು ತೆಲುಗು ಪ್ರೇಕ್ಷಕರೂ ಶ್ರದ್ಧಾ ಅವರನ್ನು ಮೆಚ್ಚಿ ಒಪ್ಪಿಕೊಂಡಿದ್ದಾರೆ.
ಹೀಗೆ ಜೆರ್ಸಿ ಚಿತ್ರ ಗೆಲುವಿನತ್ತ ನಾಗಾಲೋಟ ಆರಂಭಿಸಿರುವ ಘಳಿಗೆಯಲ್ಲಿಯೇ ಶ್ರದ್ಧಾ ತೆಲುಗಿನಲ್ಲಿ ಮತ್ತಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಈಗ ಹರಿದಾಡುತ್ತಿರೋ ಸುದ್ದಿಯೊಂದನ್ನು ಆಧರಿಸಿ ಹೇಳೋದಾದರೆ ಶ್ರದ್ಧಾ ವಿಶಾಲ್ ನಟನೆಯ ಚಿತ್ರವೊಂದಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿಶಾಲ್ ಈ ಹಿಂದೆ ಅಭಿಮನ್ಯುಡು ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಅಭಿಮನ್ಯುಡು ಎಂಬ ಆ ಚಿತ್ರ ಹಿಟ್ ಆಗಿತ್ತು.
ಇದೀಗ ಆ ಚಿತ್ರದ ಎರಡನೇ ಭಾಗಕ್ಕೆ ತಯಾರಿ ಆರಂಭವಾಗಿದೆ. ಮೊದಲ ಭಾಗದಲ್ಲಿ ವಿಶಾಲ್ ಗೆ ಜೋಡಿಯಾಗಿ ಸಮಂತಾ ನಟಿಸಿದ್ದರು. ಆದರೆ ಈಗ ಶ್ರದ್ಧಾ ಸಮಂತಾ ಜಾಗವನ್ನು ಆವರಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಶ್ರದ್ಧಾ ಸಮಂತಾ ವಿರುದ್ಧ ಅದೇನೋ ಮಾತಾಡಿದ್ದಾರೆಂದು ಅಭಿಮಾನಿಗಳು ಕೆಂಡ ಕಾರಿದ್ದರು. ಈಗ ನೋಡಿದರೆ ಸಮಂತಾ ಸ್ಥಾನವನ್ನೇ ಶ್ರದ್ಧಾ ಆವರಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ ಶ್ರದ್ಧಾ ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ಏಕಕಾಲದಲ್ಲಿಯೇ ಬ್ಯುಸಿಯಾಗಿದ್ದಾರೆ. ಅವರು ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಅದಾಗಲೇ ಕನ್ನಡದಲ್ಲಿ ಮತ್ತೊಂದಷ್ಟು ಅವಕಾಶಗಳನ್ನು ಪಡೆದುಕೊಂಡಿರೋ ಶ್ರದ್ಧಾ ತೆಲುಗಿನಲ್ಲಿಯೂ ಬಿಡುವಿಲ್ಲದಂತಾಗಿದ್ದಾರೆ.