ಬೀದರ್: ಶೋರೂಂ ಶಟರ್ ಮುರಿದು, ಗ್ಲಾಸ್ ಒಡೆದು ಅಲ್ಮೇರಾದಲ್ಲಿದ್ದ 24,500 ರೂ.ಗಳನ್ನು ಕಳ್ಳರು ದೋಚಿ ಪರಾರಿಯಾದ ಘಟನೆ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ನಿರಂಜನ ಅಷ್ಟೂರೆ ಅವರ ಮಾಲೀಕತ್ವದ ಮಹಾಲಕ್ಷ್ಮಿ ಮೋಟಾರ್ಸ್ ಶೋರೂಮಿನಲ್ಲಿ ನಸುಕಿನ ಜಾವ ಕಳ್ಳತನ ನಡೆದಿದೆ. ಕಳ್ಳರು 24,500 ರೂ.ಗಳನ್ನು ದೋಚಿರುವುದು ಮಾತ್ರವಲ್ಲದೆ 33 ಸಾವಿರ ರೂ. ಬೆಲೆ ಬಾಳುವ ಉಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಒಟ್ಟು ನಾಲ್ವರು ಕಳ್ಳರು ರಾಜಾರೋಷವಾಗಿ ಒಳಗೆ ನುಗ್ಗಿದ್ದು, ಇಬ್ಬರು ರೂಮಿನ ಎರಡೂ ಬಾಗಿಲುಗಳನ್ನು ಕಾಯುತ್ತಿದ್ದರೆ, ಇನ್ನಿಬ್ಬರು ಅಲ್ಮೇರಾ ಒಡೆದು ಹಣ ದೋಚುವುದಲ್ಲಿ ನಿರತರಾಗಿದ್ದರು. ಇದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಶೋರೂಮಿನಲ್ಲಿ ಕಳ್ಳತನ ಮಾಡಿದ ನಂತರ ಭಾಲ್ಕಿ ಪಟ್ಟಣದ ಶಿವಾಜಿ ವೃತ್ತದಲ್ಲಿರುವ ವೈನ್‍ಶಾಪ್‍ಗೂ ಕಳ್ಳರು ನುಗ್ಗಿದ್ದು, ಬರಿಗೈಯಿಂದ ವಾಪಸಾಗಿದ್ದಾರೆ ಎಂದು ಪೊಲೀಸರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಕಳ್ಳರು ಕೈಚಳಕ ತೋರಿಸಿದ ಸಿಸಿಟಿವಿ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಸುದ್ದಿ ತಿಳಿದ ತಕ್ಷಣ ನಗರ ಪೊಲೀಸ್ ಠಾಣೆ ಸಿಪಿಐ ರಮೇಶಕುಮಾರ್ ಮೈಲೂರಕರ್ ಸ್ಥಳಕ್ಕೆ ಧಾವಿಸಿ ಶೋರೂಮ್ ಪರಿಶೀಲನೆ ನಡೆಸಿದ್ದಾರೆ. ನಂತರ ಶ್ವಾನ ದಳವನ್ನು ಕರೆಸಿ ತಪಾಸಣೆ ಮಾಡಿಸಿದ್ದಾರೆ. ಈ ಕುರಿತು ಭಾಲ್ಕಿ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.