ನವದೆಹಲಿ: ಮಹಿಳೆಗೆ ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ನಡೆದುಕೊಂಡಿದ್ದ ವ್ಯಕ್ತಿಯೊಬ್ಬನನ್ನು ದೆಹಲಿಯ ಸಿವಿಲ್ ಕೋರ್ಟ್ ಜೈಲಿಗೆ ಕಳುಹಿಸಿದೆ.
2014ರಲ್ಲಿ ನಡೆದ ಪ್ರಕರಣ ಇದಾಗಿದ್ದು, ಈ ಸಂಬಂಧ ನ್ಯಾಯಾಲಯದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದು, ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಮಂಗಳವಾರ ಪ್ರಕಟಿಸಲಿದ್ದಾರೆ. ಇದನ್ನೂ ಓದಿ: ಟ್ರಾಫಿಕ್ ದಂಡದಿಂದ ತಪ್ಪಿಸಿಕೊಳ್ಳಲು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಟ್ಟ ಕ್ಯಾಬ್ ಚಾಲಕರು!
ಏನಿದು ಪ್ರಕರಣ?:
ಮಹಿಳೆಯ ಮೇಲೆ ಆಕೆಯ ಸೋದರ ಮಾವ 2014ರ ಮೇ ತಿಂಗಳಿನಲ್ಲಿ ದೈಹಿಕವಾಗಿ ಹಲ್ಲೆ ಮಾಡಿದ್ದ. ಅಷ್ಟೇ ಅಲ್ಲದೆ ಅಸಭ್ಯವಾಗಿ ವರ್ತಿಸಿ, ಮಧ್ಯದ ಬೆರಳು ತೋರಿಸಿದ್ದ. ಈ ವಿಚಾರವಾಗಿ ಸಂತ್ರಸ್ತ ಮಹಿಳೆ ಪೊಲೀಸ್ ಮೆಟ್ಟಿಲೇರಿದ್ದರು. ಈ ಸಂಬಂಧ ಐಪಿಸಿ ಸೆಕ್ಷನ್ 509 (ಮಹಿಳೆಯನ್ನು ಸನ್ನೆಯ ಮೂಲಕ ಅವಮಾನಿಸುವುದು) ಮತ್ತು 323 (ಸ್ವಯಂ ಪ್ರೇರಿತವಾಗಿ ನೋವನ್ನು ಉಂಟು ಮಾಡುವುದು) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಪೊಲೀಸ್ ತನಿಖೆಯ ಆಧಾರದ ಮೇಲೆ, 2015ರ ಅಕ್ಟೋಬರ್ 8ರಂದು ವ್ಯಕ್ತಿಯ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ವರದಿಯ ಪ್ರಕಾರ, ಆರೋಪಿಯು ತಾನು ತಪ್ಪಿತಸ್ಥನಲ್ಲ ಎಂಬ ಮನವಿ ಸಲ್ಲಿಸಿ, ಕೋರ್ಟ್ ನಲ್ಲಿ ಹೋರಾಡುವುದಾಗಿ ತಿಳಿಸಿದ್ದ. ದೂರುದಾರ ಮಹಿಳೆಯು ತನ್ನ ದೂರಿನಲ್ಲಿ ನಾಲ್ಕು ಸಾಕ್ಷ್ಯಗಳನ್ನು ಉಲ್ಲೇಖಿಸಿದ್ದರು.
ಆದಾಗ್ಯೂ, ಆರೋಪಿಯು ತನ್ನ ಮೇಲಿನ ಎಲ್ಲಾ ಆರೋಪಗಳನ್ನು ಸತತವಾಗಿ ನಿರಾಕರಿಸಿದ್ದ ಮತ್ತು ಅವುಗಳನ್ನು ಸಂಪೂರ್ಣ ಆಧಾರರಹಿತ ಎಂದು ಕರೆದಿದ್ದ. ಮಹಿಳೆ ಜೊತೆಗೆ ಆಸ್ತಿ ವಿವಾದದ ಉಂಟಾಗಿದೆ. ಇದೇ ಕಾರಣದಿಂದಾಗಿ ಮಹಿಳೆ ತನ್ನ ನಮ್ರತೆಯನ್ನು ಮೀರಿಸಿದ್ದಾಳೆ ಎಂದು ಆರೋಪಿಸಿದ್ದ. ಅಷ್ಟೇ ಅಲ್ಲದೆ ತನ್ನ ಪರವಾಗಿ ಸಾಕ್ಷಿ ಹೇಳಲು ಸ್ವಂತ ಸಹೋದರಿಯನ್ನು ಕೋರ್ಟ್ ಗೆ ಕರೆತಂದಿದ್ದ.
ಪ್ರಕರಣದ ಕುರಿತು ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಸುಂಧರಾ ಆಜಾದ್, ಆರೋಪಿಯ ಉಚ್ಚಾರಣೆ ಅಥವಾ ಸನ್ನೆಯು ಮಹಿಳೆಯ ನಮ್ರತೆಯನ್ನು ಕೆಣಕುವ ಉದ್ದೇಶದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಐಪಿಸಿ ಸೆಕ್ಷನ್ ನಲ್ಲಿ ಹೇಳಲಾದ ಎಲ್ಲ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಅಪರಾಧಿಗೆ ಗರಿಷ್ಠ 3 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ.