ಬೆಂಗಳೂರು: ಶೀಘ್ರವೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಮುಂದಿನ ಮುಖ್ಯಮಂತ್ರಿಗಳಾಗುತ್ತಾರೆ. ಅಲ್ಲದೇ ಬಿಜೆಪಿಯ ಯಾವೊಬ್ಬ ಶಾಸಕರನ್ನು ಸಹ ಕಾಂಗ್ರೆಸ್ಸಿನವರು ಟಚ್ ಮಾಡಲು ಸಾಧ್ಯವಾಗಲ್ಲ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯ ಬಿಎಸ್‍ವೈ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಲಿ ಎಂದು ಜನರು ಆಶೀರ್ವಾದ ಮಾಡಿದ್ದಾರೆ. ಅಂತೆಯೇ ಶೀಘ್ರವೇ ಅವರು ಮುಖ್ಯಮಂತ್ರಿಗಳಾಗಲಿದ್ದಾರೆ. ಆಪರೇಷನ್ ಕಮಲದ ಬಗ್ಗೆ ಮಾತನಾಡುವಷ್ಟು ದೊಡ್ಡ ಮನುಷ್ಯ ನಾನಲ್ಲ. ಬಿಜೆಪಿಗೆ ಒಳ್ಳೆಯ ದಿನಗಳು ಬರಲಿವೆ. ಯಡಿಯೂರಪ್ಪನವರಿಗೆ ಜನರ ಹಾಗೂ ಮಠಾಧೀಶರ ಆಶೀರ್ವಾದವಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯದ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ. ಬಿಜೆಪಿಯ ಯಾವೊಬ್ಬ ಶಾಸಕರನ್ನು ಸಹ ಕಾಂಗ್ರೆಸ್ಸಿನವರೇ ಆಗಲಿ, ಜೆಡಿಎಸ್ ನವರೇ ಆಗಲಿ ಮುಟ್ಟಲು ಸಾಧ್ಯವಿಲ್ಲವೆಂದು ಹೇಳಿದರು.
ತಮ್ಮ ನಿವಾಸದಲ್ಲಿ ಎರಡನೇ ದಿನವೂ ಸಹ ಸಭೆಯನ್ನು ಮುಂದುವರಿಸಿರುವ ಬಿಎಸ್‍ವೈಯವರ ನಡೆಯಿಂದಾಗಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ. ಬುಧವಾರವೂ ಸಹ ಹೊನ್ನಾಳ್ಳಿ ರೇಣುಕಾಚಾರ್ಯ ಸೇರಿದಂತೆ ತರೀಕೆರೆಯ ಸುರೇಶ್, ಮಾಯಕೊಂಡದ ಲಿಂಗಣ್ಣ, ಕಡೂರಿನ ಬೆಳ್ಳಿ ಪ್ರಕಾಶ್, ಧಾರವಾಡ ಪಶ್ಚಿಮದ ಅರವಿಂದ ಬೆಲ್ಲದ್, ಯಲಹಂಕದ ಎಸ್ ಆರ್. ವಿಶ್ವನಾಥ್, ಹಾಸನದ ಪ್ರೀತಮ್ ಗೌಡ, ಗೋವಿಂದ ಕಾರಜೋಳ, ಸಿದ್ದು ಸವದಿ ಹಾಗೂ ಸುಕುಮಾರ್ ಶೆಟ್ಟಿ ಸೇರಿದಂತೆ ಹಲವು ಶಾಸಕರ ದಂಡೆ ಬಿಎಸ್‍ವೈ ನಿವಾಸದಲ್ಲಿ ಬೀಡುಬಿಟ್ಟಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv