ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಾರ್ ಅಂಡ್ ರೆಸ್ಟೊರೆಂಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಮೈಸೂರು ರಸ್ತೆಯಲ್ಲಿರುವ ಗಜಾನನ ಬಾರ್ ಅಂಡ್ ರೆಸ್ಟೊರೆಂಟ್ ನಲ್ಲಿ ಇಂದು ನಸುಕಿನ ಜಾವ ಬೆಂಕಿ ಅವಘಡ ಸಂಭವಿಸಿದೆ. ಬಾರ್ ನ ಕೆಳ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಳಗಿನ ಜಾವ ಸುಮಾರು 3.30 ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಂಡ ಕೂಡಲೇ ಸ್ಥಳೀಯರೊಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಗೆ ವಿಚಾರ ತಿಳಿಸಿ ಎರಡು ಅಗ್ನಿಶಾಮಕ ವಾಹನ ಜೊತೆ ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಬೆಂಕಿಯನ್ನು ನಂದಿಸಿದ್ದಾರೆ. ಕೆಲಸ ಮುಗಿಸಿ ಮೇಲ್ಮಹಡಿಯಲ್ಲಿ ಬಾರ್ ನ ಸಿಬ್ಬಂದಿ ಮಲಗಿದ್ದ ಬಾರ್ ಸಿಬ್ಬಂದಿಗಳನ್ನ ಪೊಲೀಸರು ಹೊರಗೆ ಕರೆತಂದಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಅವಘಡದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರು ಹಾಗೂ ಪೊಲೀಸರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಆದರೆ ಈ ಘಟನೆಯಿಂದ ಗಜಾನನ ಬಾರ್ ನ ಕೆಳ ಮಹಡಿ ಸಂಪೂರ್ಣ ಭಸ್ಮವಾಗಿದೆ. ಈ ಹಿಂದೆ ಜನವರಿ 8 ರಂದು ಕೆ.ಆರ್ ಮಾರುಕಟ್ಟೆ ಬಳಿ ಇದ್ದ ಕೈಲಾಶ್ ಬಾರ್ ನಲ್ಲಿ ಅಗ್ನಿ ದುರಂತ ಸಂಭವಿಸಿ ಐವರು ಕಾರ್ಮಿಕರು ಸಜೀವ ದಹನವಾಗಿದ್ದರು.