ದಾವಣಗೆರೆ: ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಉಚಿತವಾಗಿ ಅಕ್ಕಿ ನೀಡುತ್ತಿದ್ದರೆ, ನ್ಯಾಯಬೆಲೆ ಅಂಗಡಿಗಳ ಮಾಲೀಕರು ಮಾತ್ರ ಜನರಿಂದ ಪಡಿತರ ನೀಡಿ ಹೆಬ್ಬೆಟ್ಟು ಒತ್ತಿಸಿಕೊಳ್ಳಲು 10 ರೂಪಾಯಿ, ತೂಕ ಮಾಡಿದ್ದಕ್ಕೆ 10 ರೂ. ಹಣ ವಸೂಲಿಯಲ್ಲಿ ತೊಡಗಿದ್ದಾರೆ. ಮಾಲೀಕರ ಅಂಧ ದರ್ಬಾರ್ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸರ್ಕಾರ ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಆಹಾರ ಮತ್ತು ನಾಗರಿಕ ಇಲಾಖೆ ಮೂಲಕ ಕೂಪನ್ ವ್ಯವಸ್ಥೆ ಜಾರಿಗೆ ತಂದಿತ್ತು. ಆದರೆ ಅಲ್ಲೂ ಕೂಡ ಭ್ರಷ್ಟಾಚಾರ ನಡೆಯುವ ದೂರಗಳು ಬಂದಾಗ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತಂದರು ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರದಾರರ ಬಳಿ ಹೆಬ್ಬೆಟ್ಟು ಒತ್ತಿಸಿಕೊಳ್ಳಲು 10 ರೂಪಾಯಿ, ತೂಕ ಮಾಡಿದ್ದಕ್ಕೆ 10 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಇನ್ನು ತೊಗರಿಗೆ ಸರ್ಕಾರ 38 ರೂಪಾಯಿ ನಿಗದಿ ಮಾಡಿದರೆ, ಇವರು 50 ರೂ. ವಸೂಲಿ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ 890 ಪಡಿತರ ವಿತರಣಾ ಕೇಂದ್ರಗಳಿದ್ದು, ಶೇಕಡ 95 ರಷ್ಟು ಕಡೆ ಬಯೋಮೆಟ್ರಿಕ್ ಬಳಸಲಾಗುತ್ತಿದೆ. ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಹೀಗೆ ಅಕ್ರಮವಾಗಿ ಹಣ ವಸೂಲಿ ಮಾಡುವ ಕುರಿತು ಮಾಹಿತಿ ಇದ್ದರು ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಂಡಿಲ್ಲ.
ಪಡಿತರದಾರರು ಯಾವುದೇ ಕಾರಣಕ್ಕೂ ಅಧಿಕ ಹಣ ನೀಡಬಾರದು. ಹಾಗೇನಾದರೂ ಮಾಲೀಕರು ಹಣ ಕೇಳಿದರೆ ಜಿಲ್ಲಾಡಳಿತಕ್ಕೆ ದೂರು ನೀಡಿ. ಅಂತಹ ಅಂಗಡಿಗಳ ಪರವಾನಗಿ ರದ್ದು ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಎಚ್ಚರಿಕೆ ನೀಡಿದ್ದಾರೆ.