ಬೆಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹಾರ್ಡ್‍ವೇರ್ ಅಂಗಡಿಗೆ ಬೆಂಕಿ ಹೊತ್ತಿಕೊಂಡು ಅಂಗಡಿ ಮಾಲೀಕನ ಮಗ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಮಾಲೀಕ ಶಂಕರಾಚಾರ್ಯ ಮಗ 17 ವರ್ಷದ ರವಿಕುಮಾರ್ ಮೃಪಟ್ಟ ವ್ಯಕ್ತಿ. ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿನ ಶಂಕರಾಚಾರ್ಯ ಎಂಬವರಿಗೆ ಸೇರಿದ ರಾಜು ಹಾರ್ಡ್‍ವೇರ್ ಅಂಗಡಿಯಲ್ಲಿ ಘಟನೆ ನಡೆದಿದೆ.
ಅಂಗಡಿಯಲ್ಲಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ರವಿಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಹೊಸಕೋಟೆ ತಾಲೂಕಿನಲ್ಲಿ ದೊಡ್ಡ ಕೈಗಾರಿಕಾ ಪ್ರದೇಶದಲ್ಲಿ ಇಂತಹ ಅಗ್ನಿ ಆಕಸ್ಮಿಕ ಘಟನೆಗಳು ನಡೆಯುತ್ತಿದ್ದರೂ, ಸಮೀಪದಲ್ಲಿ ಅಗ್ನಿಶಾಮಕ ಠಾಣೆ ಇಲ್ಲದಿರುವುದು ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿದೆ.
ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.